November 5, 2026
Thursday, November 5, 2026
spot_img

ಥಿಯೇಟರ್‌ನಲ್ಲಿ ಕಟ್ ಆದ ಸೀನ್‌ಗಳು ಒಟಿಟಿಯಲ್ಲಿ ರಿವೀಲ್: ‘ಜೈಲರ್ 2’ ಬಗ್ಗೆ ಹೊಸ ಅಪ್‌ಡೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ಜೈಲರ್ 2’ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿರುವ ಈ ಚಿತ್ರ, ಡಿಜಿಟಲ್ ಪ್ರೀಮಿಯರ್ ಮೂಲಕ ಮತ್ತೊಮ್ಮೆ ಮನರಂಜನೆ ನೀಡಲು ಮುಂದಾಗಿದೆ. ವಿಶೇಷವಾಗಿ ಒಟಿಟಿ ಆವೃತ್ತಿಯಲ್ಲಿ ಸಿನಿಮಾದ ಅವಧಿ ಹೆಚ್ಚಾಗುತ್ತಿರುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ನಿಗದಿತ ಅವಧಿಯ ಕಾರಣದಿಂದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ, ಈಗ ಒಟಿಟಿ ರಿಲೀಸ್ ವೇಳೆ ಸುಮಾರು ಮೂವತ್ತು ನಿಮಿಷಗಳಷ್ಟು ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರಿಗೂ ಒಟಿಟಿಯಲ್ಲಿ ಹೊಸದೊಂದು ಅನುಭವ ಸಿಗುವುದು ಖಚಿತವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಸನ್ ನೆಕ್ಸ್ಟ್ ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾ ನವೆಂಬರ್ 10ರ ಬಳಿಕ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಥಿಯೇಟರ್ ರಿಲೀಸ್ ವೇಳೆ ಮೋಹನ್ ಲಾಲ್, ವಿಜಯ್ ಸೇತುಪತಿ, ಶಿವರಾಜ್‌ಕುಮಾರ್ ಹಾಗೂ ಹೃತಿಕ್ ರೋಷನ್ ಅವರ ಕೆಲವು ರೋಚಕ ದೃಶ್ಯಗಳಿಗೆ ಕತ್ರಿ ಹಾಕಲಾಗಿತ್ತು. ಇದರಿಂದ ಆಯಾ ನಟರ ಅಭಿಮಾನಿಗಳಿಗೆ ತೀವ್ರ ನಿರಾಶೆಯುಂಟಾಗಿತ್ತು. ಅದರಲ್ಲೂ ಶಿವಣ್ಣ ಅವರ ಸ್ಕ್ರೀನ್ ಸ್ಪೇಸ್ ಕಡಿಮೆ ಆಗಿದ್ದಕ್ಕೆ ಕರ್ನಾಟಕದ ಕನ್ನಡಿಗರು ಮತ್ತು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈಗ ಒಟಿಟಿಗಾಗಿ ತಯಾರಾಗುತ್ತಿರುವ ವಿಸ್ತೃತ ಆವೃತ್ತಿಯಲ್ಲಿ ಈ ಎಲ್ಲಾ ಕಟ್ ಮಾಡಲಾದ ದೃಶ್ಯಗಳು ಮರುಸೇರ್ಪಡೆಯಾಗುವ ನಿರೀಕ್ಷೆಯಿದೆ. ಆದರೆ, ಚಿತ್ರತಂಡದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಬಿಗ್ ಬಜೆಟ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಎಸ್.ಜೆ. ಸೂರ್ಯ, ವಿದ್ಯಾ ಬಾಲನ್ ಹಾಗೂ ಶಿವರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ದೊಡ್ಡದು. ಸದ್ಯದಲ್ಲೇ ಚಿತ್ರತಂಡದಿಂದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

Must Read

Skip to toolbar