November 5, 2026
Thursday, November 5, 2026
spot_img

ಕಬ್ಬಿನ ಬೆಲೆ ಕಿಚ್ಚು ತೀವ್ರ; ರೈತರ ಪಾದಯಾತ್ರೆ ತಡೆದ ಪೊಲೀಸರು, ಚೂನಪ್ಪ ಪೂಜಾರಿ ಸೇರಿ ನೂರಾರು ರೈತರು ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕೆಂಬ ಬೇಡಿಕೆಯೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಗುರುವಾರ ಮತ್ತಷ್ಟು ತೀವ್ರಗೊಂಡಿತು. ಜೈಲ್ ಭರೋ ಚಳವಳಿ ಹಾಗೂ ಪಾದಯಾತ್ರೆಗೆ ಪೊಲೀಸರು ತಡೆ ಒಡ್ಡಿದ ಹಿನ್ನೆಲೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟವೂ ನಡೆದಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

5,500 ರೂ ಕಬ್ಬಿನ ದರಕ್ಕೆ ರೈತರ ಪಟ್ಟು

ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ 4,500 ಹಾಗೂ ರಾಜ್ಯ ಸರ್ಕಾರದಿಂದ 1,000 ಪ್ರೋತ್ಸಾಹಧನ ಸೇರಿ ಒಟ್ಟು 5,500 ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿಗೆ 31ರಿಂದ 60ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, 3,600 ದರದ ಘೋಷಣೆಯ ವಿಚಾರದಲ್ಲಿ ರೈತ ಸಂಘಟನೆಗಳ ನಡುವೆ ಭಿನ್ನಮತವೂ ವ್ಯಕ್ತವಾಗಿದೆ.

ಮುಕ್ತಿ ಮಠದ ಬಳಿ ಪಾದಯಾತ್ರೆಗೆ ತಡೆ

ಬೆಳಗಾವಿ ತಾಲೂಕಿನ ಮುಕ್ತಿ ಮಠದ ಬಳಿ ಬೆಳಗ್ಗೆಯಿಂದ ಜಮಾಯಿಸಿದ್ದ ರೈತರು ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಲು ಸಿದ್ಧರಾಗಿದ್ದರು. ಅನುಮತಿ ಇಲ್ಲವೆಂದು ಪೊಲೀಸರು ತಡೆದಾಗ ಮುಖಂಡರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಪಾದಯಾತ್ರೆ ಮುಂದುವರಿಸಲು ಯತ್ನಿಸಿದ ಚೂನಪ್ಪ ಪೂಜಾರಿ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನು ವಿರೋಧಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಬಿಎನ್ಎಸ್ಎಸ್ ಕಲಂ 163ರಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನವೆಂಬರ್ 5ರ ಬೆಳಗ್ಗೆ 6ರಿಂದ ನವೆಂಬರ್ 7ರ ಬೆಳಗ್ಗೆ 6ರವರೆಗೆ ಆದೇಶ ಜಾರಿಯಲ್ಲಿರಲಿದೆ. ಮತ್ತೊಂದೆಡೆ, ಗುರ್ಲಾಪುರದಿಂದ ಬೆಳಗಾವಿಗೆ ಬರುತ್ತಿದ್ದ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಅವರನ್ನು ಮೂಡಲಗಿ ಬಳಿ ವಶಕ್ಕೆ ಪಡೆಯಲಾಗಿದೆ. ಪ್ರೇಮ ಚೌಗಲಾ ಸೇರಿದಂತೆ ಹಲವು ಮುಖಂಡರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.

ಇದನ್ನೂ ಓದಿ:

ರೈತರ ಬಂಧನ ಖಂಡಿಸಿ ನ್ಯಾಯವಾದಿಗಳ ಪ್ರತಿಭಟನೆ

ಚೂನಪ್ಪ ಪೂಜಾರಿ ಸೇರಿದಂತೆ ರೈತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಬೆಳಗಾವಿಯ ನ್ಯಾಯವಾದಿಗಳು ಕಲಾಪ ಬಹಿಷ್ಕರಿಸಿ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ವಶಕ್ಕೆ ಪಡೆದ ರೈತರನ್ನು ಸಾಗಿಸುತ್ತಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಅಸ್ವಸ್ಥರಾದರು. ಅವರನ್ನು ಬಸಾಪುರ ಗ್ರಾಮದ ಸಮೀಪ ನಿರ್ಜನ ಪ್ರದೇಶದಲ್ಲಿ ಇಳಿಸಿ ಪೊಲೀಸರು ತೆರಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬಳಿಕ ಸ್ಥಳೀಯರು ಅವರನ್ನು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಹೋರಾಟ ಮುಂದುವರಿಸುವ ಎಚ್ಚರಿಕೆ

ಬಂಧನಗಳಿಂದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದ್ದಾರೆ.

Must Read

Skip to toolbar