November 5, 2026
Thursday, November 5, 2026
spot_img

ರಾಮಾಯಣದಲ್ಲಿ ಸೀತೆಯಾಗಬೇಕಿತ್ತು ಶ್ರೀನಿಧಿ ಶೆಟ್ಟಿ: ಕೆಜಿಎಫ್‌ ಸುಂದರಿಯ ಅಚ್ಚರಿಯ ಗುಟ್ಟು ರಟ್ಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಚಿತ್ರವಾದ ‘ರಾಮಾಯಣ’ ಸಿನಿಮಾ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವತುಂಬಿದ್ದಾರೆ. ಈ ನಡುವೆ, ‘ಕೆಜಿಎಫ್’ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಕೂಡ ಇದೇ ಸೀತಾ ಪಾತ್ರಕ್ಕಾಗಿ ಆಡಿಷನ್ ನೀಡಿದ್ದರು ಎಂಬ ರೋಚಕ ಸಂಗತಿ ಇದೀಗ ಹೊರಬಿದ್ದಿದೆ.

ಪ್ರಸಿದ್ಧ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ನಟಿ ಶ್ರೀನಿಧಿ ಶೆಟ್ಟಿ, ತಾವೂ ಕೂಡ ‘ರಾಮಾಯಣ’ ಚಿತ್ರದ ಸೀತಾ ಪಾತ್ರಕ್ಕಾಗಿ ಮೂರು ದೃಶ್ಯಗಳಿಗೆ ಅದ್ಭುತವಾಗಿ ಸ್ಕ್ರೀನ್ ಟೆಸ್ಟ್ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ತಮ್ಮ ಆಡಿಷನ್ ಚಿತ್ರತಂಡಕ್ಕೆ ಬಹಳ ಇಷ್ಟವಾಗಿತ್ತು ಎಂಬುದನ್ನೂ ಅವರು ಖಚಿತಪಡಿಸಿದ್ದಾರೆ.

ಆದರೆ, ಅದೇ ಸಮಯದಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಬಿಡುಗಡೆಯಾಗಿ, ರಾಕಿ ಹಾಗೂ ರೀನಾ ಜೋಡಿಯನ್ನು ಪ್ರೇಕ್ಷಕರು ತೆರೆಯ ಮೇಲೆ ಒಪ್ಪಿಕೊಳ್ಳುವ ರೀತಿಯೇ ಬದಲಾಗಿತ್ತು. ಈ ಕುರಿತು ಮಾತನಾಡಿದ ಶ್ರೀನಿಧಿ, “ಒಂದೇ ವರ್ಷದಲ್ಲಿ ಕೆಜಿಎಫ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ನಾವು, ಈ ಸಿನಿಮಾದಲ್ಲಿ ಪರಸ್ಪರ ಎದುರಾಳಿಗಳಾಗಿ ನಟಿಸಿದರೆ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಗೊಂದಲ ನನ್ನಲ್ಲಿತ್ತು” ಎಂದು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಒಂದು ವೇಳೆ ಈ ಅವಕಾಶ ಕೈತಪ್ಪಿ ಹೋಯಿತಲ್ಲಾ ಎಂಬ ಬೇಸರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ಅವಕಾಶ ಸಿಗದಿದ್ದರೂ ಯಾವುದೇ ಕೊರಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರಕ್ಕೆ ಅತಿ ಸೂಕ್ತ ಹಾಗೂ ಅತ್ಯುತ್ತಮ ಆಯ್ಕೆಯಾಗಿದ್ದಾರೆ ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಲ್ಲದೆ, ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ತಾವು ಕೂಡ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ವೃತ್ತಿಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಶ್ರೀನಿಧಿ ಶೆಟ್ಟಿಯ ಈ ಸಕಾರಾತ್ಮಕ ಹಾಗೂ ಸರಳ ಮಾತುಗಳು ಸದ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

Must Read

Skip to toolbar