November 5, 2026
Thursday, November 5, 2026
spot_img

ಇನ್ಮೊಬಿ ಹೆಸರಿನಲ್ಲಿ ಇಬ್ಬಲೂರು ಮೆಟ್ರೋ ನಿಲ್ದಾಣ: 65 ಕೋಟಿ ರೂ. ಒಪ್ಪಂದಕ್ಕೆ BMRCL ಸಹಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಗರದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಖಾಸಗಿ ಕಂಪನಿಗಳ ಸಹಭಾಗಿತ್ವ ಮತ್ತಷ್ಟು ಬಲ ದೊರೆತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇನ್ಮೊಬಿ ತಂತ್ರಜ್ಞಾನ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹೊರ ವರ್ತುಲ ರಸ್ತೆ (ORR) ಮೆಟ್ರೋ ಮಾರ್ಗದ ಇಬ್ಬಲೂರು ನಿಲ್ದಾಣಕ್ಕೆ ‘ಇನ್ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ’ ಎಂದು ಹೆಸರಿಡಲಾಗುತ್ತದೆ. ನವೆಂಬರ್ 3ರಂದು ಸಹಿ ಮಾಡಲಾದ ಒಪ್ಪಂದದಡಿ ಕಂಪನಿಯು 65 ಕೋಟಿ ನೀಡಲಿದೆ.

ನಾಮಕರಣ ಹಕ್ಕು ಮತ್ತು ನಿರ್ಮಾಣಕ್ಕೆ ನೆರವು

ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕು ಹಾಗೂ ನಿರ್ಮಾಣ ವೆಚ್ಚಕ್ಕೆ ಇನ್ಮೊಬಿ ನೀಡುವ 65 ಕೋಟಿ ಮೊತ್ತ ಬಳಕೆಯಾಗಲಿದೆ. ಒಪ್ಪಂದಕ್ಕೆ BMRCL ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಮತ್ತು ಇನ್ಮೊಬಿ ಜಾಗತಿಕ ಹಿರಿಯ ಉಪಾಧ್ಯಕ್ಷೆ ಹಾಗೂ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ಸುಬಿ ಚತುರ್ವೇದಿ ಸಹಿ ಹಾಕಿದ್ದಾರೆ.

ಈ ಸಹಭಾಗಿತ್ವವು ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವುದರ ಜೊತೆಗೆ ನಿಗಮದ ಟಿಕೆಟ್ ಹೊರತಾದ ಆದಾಯವನ್ನು ಹೆಚ್ಚಿಸಲಿದೆ ಎಂದು ಜಾಫರ್ ತಿಳಿಸಿದ್ದಾರೆ.

ಐಟಿ ಉದ್ಯೋಗಿಗಳಿಗೆ ಸಂಪರ್ಕದ ಅನುಕೂಲ

ನಿರ್ಮಾಣ ಹಂತದಲ್ಲಿರುವ ಇಬ್ಬಲೂರು ನಿಲ್ದಾಣವು ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಮತ್ತು ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ. ಬ್ಲೂ ಮತ್ತು ರೆಡ್ ಮೆಟ್ರೋ ಮಾರ್ಗಗಳ ನಡುವೆ ಸಂಪರ್ಕ ನಿಲ್ದಾಣವಾಗಿಯೂ ಇದು ಅಭಿವೃದ್ಧಿಯಾಗುತ್ತಿದೆ. ಇದರಿಂದ ORR ಪ್ರದೇಶದ ಸಂಚಾರ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.

ಇದನ್ನೂ ಓದಿ:

ನಗರದ ಬೆಳವಣಿಗೆಗೆ ಇನ್ಮೊಬಿ ಬದ್ಧತೆ

ಇನ್ಮೊಬಿ ಸಂಸ್ಥಾಪಕ ಮತ್ತು ಸಿಇಒ ನವೀನ್ ತಿವಾರಿ, ಬೆಂಗಳೂರು ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದು, ನಗರದ ಅಭಿವೃದ್ಧಿಗೆ ಮರಳಿ ಕೊಡುಗೆ ನೀಡುವುದು ಸಂಸ್ಥೆಯ ಜವಾಬ್ದಾರಿ ಎಂದು ಹೇಳಿದ್ದಾರೆ. ಸಾರ್ವಜನಿಕ ಸಾರಿಗೆ ಜನರನ್ನು ಉದ್ಯೋಗ, ಶಿಕ್ಷಣ ಮತ್ತು ನಗರದ ವಿವಿಧ ಭಾಗಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಸುಬಿ ಚತುರ್ವೇದಿ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಿಗೆ ಕಾರ್ಪೊರೇಟ್ ಸಹಭಾಗಿತ್ವ

ORR ಮಾರ್ಗದಲ್ಲಿ ಈಗಾಗಲೇ ಬೆಳ್ಳಂದೂರು ನಿಲ್ದಾಣಕ್ಕೆ ಪ್ರೆಸ್ಟೀಜ್ ಗ್ರೂಪ್, ಕಾಡುಬೀಸನಹಳ್ಳಿ ನಿಲ್ದಾಣಕ್ಕೆ ಎಂಬಸಿ ಗ್ರೂಪ್ ಮತ್ತು DRDO ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿಲ್ದಾಣಕ್ಕೆ ಬಾಗ್ಮನೆ ಗ್ರೂಪ್ ನಾಮಕರಣ ಹಕ್ಕು ಪಡೆದಿವೆ.

Must Read