November 5, 2026
Thursday, November 5, 2026
spot_img

ಬೆಳಗಾವಿಯ ಕಬ್ಬು ಬೆಳೆಗಾರರ ‘ಜೈಲ್ ಭರೋ’ ಚಳವಳಿಗೆ ಪೊಲೀಸರ ತಡೆ: ನೂರಾರು ರೈತರು ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಹಿಂಡಲಗಾ ಜೈಲ್ ಭರೋ ಚಳವಳಿಗೆ ಪೊಲೀಸರು ತಡೆ ಒಡ್ಡಿದ್ದು, ಹೋರಾಟದ ನೇತೃತ್ವ ವಹಿಸಿದ್ದ ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಮುಕ್ತಿಮಠದಿಂದ ಹಿಂಡಲಗಾ ಜೈಲಿನವರೆಗೆ ಪಾದಯಾತ್ರೆ ನಡೆಸಿ ಜೈಲ್ ಭರೋ ಚಳವಳಿ ನಡೆಸಲು ರೈತರು ಸಜ್ಜಾಗಿದ್ದರು. ಆದರೆ, ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪಾದಯಾತ್ರೆ ಆರಂಭಕ್ಕೂ ಮುನ್ನವೇ ರೈತರನ್ನು ತಡೆದು ವಶಕ್ಕೆ ಪಡೆಯಲು ಮುಂದಾದಾಗ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಬಲವಂತವಾಗಿ ನೂರಾರು ರೈತರನ್ನು ವಶಕ್ಕೆ ಪಡೆದರು.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ, ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 1000 ರೂ. ನೀಡುವ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಪೊಲೀಸರು ವಶಕ್ಕೆ ಪಡೆದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ರೈತರು ವಿವಿಧೆಡೆ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ಮುಂದುವರಿಸಬೇಕು ಎಂದು ಕರೆ ನೀಡಿದರು. ಕಬ್ಬಿನ ಬೆಲೆ ಹೆಚ್ಚಳದ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Must Read

Skip to toolbar