ಹೊಸದಿಗಂತ ವರದಿ ರಾಮನಗರ :
ಬಿಜೆಪಿ ರೈತ ವಿರೋಧಿ ಪಕ್ಷ. ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದಾಗ ಏಕೆ ಪ್ರತಿಭಟನೆ ಮಾಡಲಿಲ್ಲ? ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನ ಮೊದಲು ಕಡಿಮೆ ಮಾಡಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ರಾಮನಗರದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಾಲಿನ ಬೆಲೆ ಹೆಚ್ಚಳ ಮಾಡಿದ್ದಕ್ಕಾಗಿ ಹಸಿರು ಸೇನೆಯವರು ಅಭಿನಂದನಾ ಪತ್ರ ನೀಡಿಸಿದ್ದಾರೆ. ಕೇಂದ್ರ ಸರ್ಕಾರ ಇಂಧನ ದರ ಇಳಿಸಿದರೆ ನಾವು ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ” ಎಂದು ಹೇಳಿದರು.
ಮೋದಿ ಭೇಟಿಗೆ ಪತ್ರ ಬರೆದಿದ್ದೇನೆ
ರೈತರ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವಿರಾ ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ ಭೇಟಿ ಮಾಡುತ್ತೇನೆ. ಈಗಾಗಲೇ ಪತ್ರ ಬರೆದಿದ್ದೇನೆ. ನವೆಂಬರ್ 13ರಂದು ಪ್ರಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಅಂದು ಮಾತನಾಡುತ್ತೇನೆ. ಇಲ್ಲವಾದರೆ ಬೇರೆ ಸಮಯ ಕೇಳುತ್ತೇನೆ” ಎಂದು ತಿಳಿಸಿದರು.
“ಕಬ್ಬು ಬೆಲೆ ವಿಚಾರದಲ್ಲಿ ಕಾರ್ಖಾನೆಗಳು ಮತ್ತು ರೈತರೊಂದಿಗೆ ಚರ್ಚಿಸಲಾಗಿದೆ. ರೈತರಿಗೆ ನ್ಯಾಯ ಸಿಗುವಂತೆ ಕಾರ್ಖಾನೆಗಳು ಬೆಲೆ ನಿಗದಿಪಡಿಸಬೇಕು ಎಂದು ತಿಳಿಸಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಕಬ್ಬು ಕಟಾವು ಮತ್ತು ಸಾಗಣೆಗೆ ಪೊಲೀಸ್ ರಕ್ಷಣೆ ನೀಡುವಂತೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಬ್ಬು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.
ಗೃಹಲಕ್ಷ್ಮಿಗೆ ₹7,400 ಕೋಟಿ ಬಿಡುಗಡೆ
“ಬುಧವಾರದಂದು 7,400 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಣ ಬಿಡುಗಡೆ ಮಾಡಲಾಗಿದೆ. ನಾಳೆ ಕೆಲವು ಮಹಿಳೆಯರು ನನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಅವರನ್ನು ಭೇಟಿ ಮಾಡುತ್ತೇನೆ” ಎಂದರು.
“ರಾಮನಗರಕ್ಕೆ ನಾನು ಪ್ರವಾಸ ಮಾಡಲು ಬಂದಿಲ್ಲ. ಇದು ನನ್ನೂರು, ನನ್ನ ಮನೆ, ನನ್ನ ಜನ. ನಮ್ಮವರನ್ನು ಭೇಟಿ ಮಾಡಲು ಬಂದಿದ್ದೇನೆ. ನಮ್ಮ ಮನೆಗೆ ಬಂದಂತೆ ಸಹಜವಾಗಿ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದರು.
“ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರು ಹಾಗೂ ಸಚಿವರನ್ನು ಪ್ರತ್ಯೇಕವಾಗಿ ಕರೆದು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಯಾವ ಕ್ಷೇತ್ರದಲ್ಲಿ ಏನೇನು ಕೆಲಸ ಆಗಬೇಕು ಎಂಬುದರ ಕುರಿತು ಶಾಸಕರಿಂದ ಪಟ್ಟಿ ಪಡೆದುಕೊಳ್ಳುತ್ತಿದ್ದೇನೆ. ಹಿಂದೆ ನೀಡಿರುವ ಪಟ್ಟಿಯಲ್ಲಿನ ಕಾಮಗಾರಿಗಳನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕನಕಪುರ ಮತ್ತು ರಾಮನಗರದಲ್ಲಿ ಆಸ್ಪತ್ರೆಗಳ ಕಾಮಗಾರಿ ನಡೆಯುತ್ತಿದೆ. ಮಾಗಡಿಯಲ್ಲಿಯೂ ಹಲವು ಯೋಜನೆಗಳಿವೆ. ನೀರಾವರಿ ಕ್ಷೇತ್ರದಲ್ಲಿ ಈಗಾಗಲೇ ₹1,000 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಾಗಿವೆ. ಎಲ್ಲವನ್ನೂ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು” ಎಂದರು.
ನಾಲ್ಕು ಕಡೆ ಮೆಡಿಕಲ್ ಕಾಲೇಜು ಕೆಲಸ
ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಕೇಳಿದಾಗ, “ನಾವು ಅಧಿಕಾರಕ್ಕೆ ಬಂದ ಬಳಿಕ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿದ್ದೇವೆ. ಚನ್ನಪಟ್ಟಣದಲ್ಲಿ ದಯಾನಂದ ಸಾಗರ ಸಂಸ್ಥೆಗೆ ಹಿಂದೆಯೇ ಅವಕಾಶ ನೀಡಲಾಗಿದ್ದು, ಅಲ್ಲಿ ಕಾಮಗಾರಿ ನಡೆಯುತ್ತಿದೆ. ರಾಮನಗರ ಮತ್ತು ಕನಕಪುರ ಕ್ಷೇತ್ರಗಳಲ್ಲಿಯೂ ಮೆಡಿಕಲ್ ಕಾಲೇಜುಗಳ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ನಾಲ್ಕು ಕಡೆ ಕೆಲಸಗಳು ನಡೆಯುತ್ತಿವೆ” ಎಂದು ಹೇಳಿದರು.
ಮೆಡಿಕಲ್ ಕಾಲೇಜು ಉದ್ಘಾಟನೆ ಯಾವಾಗ ಎಂಬ ಪ್ರಶ್ನೆಗೆ, “ಖಂಡಿತ ಶೀಘ್ರ ಉದ್ಘಾಟನೆಯಾಗಲಿದೆ. ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಪ್ರತ್ಯೇಕವಾಗಿ ನೇಮಿಸಿ ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ” ತಿಳಿಸಿದರು.
ನಿಗಮ ಮಂಡಳಿ ಆಕಾಂಕ್ಷಿಗಳ ಬೇಡಿಕೆ ಸಹಜ
ಜಿಲ್ಲೆಯ ಹಿರಿಯ ನಾಯಕರು ನಿಗಮ ಮಂಡಳಿ ಸ್ಥಾನಮಾನಕ್ಕಾಗಿ ತಮ್ಮನ್ನು ಭೇಟಿ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, “ತಪ್ಪೇನಿಲ್ಲ, ನಾನೂ ಇದೇ ಜಿಲ್ಲೆಯವನಾದ್ದರಿಂದ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಾರೆ” ಎಂದರು.
ಬಡವರ ಬದುಕಿಗೆ ನೆರವಾಗುವುದೇ ಉದ್ದೇಶ
ಚುನಾವಣೆ ದೃಷ್ಟಿಯಿಂದ ಯೋಜನೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, “ನಾವಿರುವುದು ರಾಜಕಾರಣ ಮಾಡುವುದಕ್ಕಲ್ಲ. ಬಡವರ ಬದುಕಿಗೆ ನೆರವಾಗಲು, ಅವರಿಗೆ ಸೇವೆ ಸಲ್ಲಿಸಲು. ರಾಮನಗರದಲ್ಲಿ ಪ್ರತಿ ಮನೆಗೂ ತೆರಳಿ ನಾನು ಮತ್ತು ಶಾಸಕ ಇಕ್ಬಾಲ್ ಹುಸೇನ್ ಮಾತು ಕೊಟ್ಟಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು” ಎಂದರು.
“ಯೋಜನೆಗಳ ಹಣ ಪಾವತಿಯಲ್ಲಿ ಕೆಲವೊಮ್ಮೆ ಒಂದು ಅಥವಾ ಎರಡು ತಿಂಗಳ ವ್ಯತ್ಯಾಸವಾಗಬಹುದು. ಸರಕಾರಕ್ಕೆ ಆದಾಯ ಸಂಗ್ರಹವಾದಂತೆ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ. ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಪಿಂಚಣಿಗಳ ಪಾವತಿಗೂ ನಿಗದಿತ ದಿನಾಂಕ ಇರಬೇಕು. ಸರ್ಕಾರಿ ನೌಕರರಿಗೆ ಸಂಬಳ ನೀಡುವ ಮಾದರಿಯಲ್ಲಿ ಪಿಂಚಣಿಯನ್ನೂ ನಿಯಮಿತವಾಗಿ ನೀಡುವ ವ್ಯವಸ್ಥೆ ರೂಪಿಸಬೇಕು ಎಂದು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ” ಎಂದು ಹೇಳಿದರು.
ಎಸ್ಐಆರ್ ಕುರಿತು ನಮ್ಮದೇ ಆಕ್ಷೇಪವಿದೆ
ಸಚಿವ ಸಂಪುಟ ಸಭೆಯಲ್ಲಿ ಎಸ್ಐಆರ್ ಕುರಿತು ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ತಕರಾರುಗಳಿದ್ದವು. ಎಸ್ಐಆರ್ ವಿಚಾರದಲ್ಲಿಯೂ ನಮ್ಮದೇ ಆದ ಆಕ್ಷೇಪಗಳಿವೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.



