ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹವಾಮಾನ ಬದಲಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ವರುಣ ದೇವ ಕೃಪೆ ತೋರಲಿದ್ದು, ಜನರಿಗೆ ತಂಪಾದ ವಾತಾವರಣದ ಅನುಭವವಾಗಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಮಂಡ್ಯ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ನವೆಂಬರ್ 7ರವರೆಗೆ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಮತ್ತು ಮಿಂಚಿನ ಅಬ್ಬರ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಹಾಗೂ ಗುಡುಗು-ಮಿಂಚಿನ ವಾತಾವರಣವಿರಲಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮುಖ್ಯವಾಗಿ ಒಣಹವೆ ಮುಂದುವರಿಯುವ ನಿರೀಕ್ಷೆಯಿದೆ. ಕರಾವಳಿ ಭಾಗದ ಜನರಿಗೆ ಈ ಅನಿರೀಕ್ಷಿತ ಮಳೆ ತಂಪಾದ ವಾತಾವರಣವನ್ನು ತಂದಿದೆ.
ಮತ್ತೊಂದೆಡೆ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಮುಖ್ಯವಾಗಿ ಒಣಹವೆ ಇರಲಿದೆ. ಇದರೊಂದಿಗೆ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಒಣಹವೆಯೇ ಮುಂದುವರಿಯಲಿದೆ.



