ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀರ್ಘ ಕಾಯುವಿಕೆಯ ನಂತರ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ತನ್ನ ಅಬ್ಬರ ಶುರುಮಾಡಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಇದರ ಪರಿಣಾಮವಾಗಿ, ಮುಂಗಡ ಟಿಕೆಟ್ ಬುಕಿಂಗ್ನಲ್ಲೇ ಸಿನಿಮಾ ಹೊಸ ದಾಖಲೆ ಬರೆಯಿತು. ವಿಶ್ವದಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ಗಳು ಮುಂಗಡವಾಗಿ ಮಾರಾಟವಾಗಿದ್ದರೆ, ಭಾರತವೊಂದರಲ್ಲೇ 120 ಕೋಟಿ ರೂಪಾಯಿಗೂ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿತ್ತು. ಬಿಡುಗಡೆಯ ದಿನದಂದು ಮುಂಜಾನೆಯ ಪ್ರದರ್ಶನಗಳೇ ‘ಹೌಸ್ಫುಲ್’ ಆಗಿ ಪ್ರದರ್ಶನ ಕಂಡವು.
ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಬರೋಬ್ಬರಿ 64.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇನ್ನು ಗ್ರಾಸ್ ಕಲೆಕ್ಷನ್ 77 ಕೋಟಿ ರೂಪಾಯಿ ದಾಟಿದೆ. ಹಿಂದಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರ, ತೆಲುಗಿನಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕನ್ನಡಿಗ ಯಶ್ ರಾವಣನಾಗಿ ನಟಿಸಿರುವುದರಿಂದ, ಕನ್ನಡ ಆವೃತ್ತಿಯಲ್ಲೂ ಮೊದಲ ದಿನ 7.25 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಈ ಭರ್ಜರಿ ಗಳಿಕೆಯ ಮೂಲಕ ‘ರಾಮಾಯಣ’ ಸಿನಿಮಾ ಶಾರುಖ್ ಖಾನ್ ಅವರ ‘ಪಠಾಣ್’ (57 ಕೋಟಿ ರೂ.) ಹಾಗೂ ರಣಬೀರ್ ಅವರದೇ ‘ಅನಿಮಲ್’ (63 ಕೋಟಿ ರೂ.) ಸಿನಿಮಾಗಳ ಮೊದಲ ದಿನದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ.
ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದ್ದರೂ, 2023ರಲ್ಲಿ ಬಿಡುಗಡೆಯಾಗಿದ್ದ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಮೊದಲ ದಿನದ ಗಳಿಕೆಯ (86.75 ಕೋಟಿ ರೂ.) ದಾಖಲೆಯನ್ನು ‘ರಾಮಾಯಣ’ಕ್ಕೆ ಮುರಿಯಲು ಸಾಧ್ಯವಾಗಿಲ್ಲ. ಆದಾಗ್ಯೂ, ವಿಶ್ವದಾದ್ಯಂತದ ಒಟ್ಟು ಗಳಿಕೆಯ ಪೂರ್ಣ ವಿವರ ಬಂದ ನಂತರ ಚಿತ್ರದ ನೈಜ ಪರ್ಫಾರ್ಮೆನ್ಸ್ ತಿಳಿಯಲಿದೆ.



