November 6, 2026
Friday, November 6, 2026
spot_img

ಸುಂಟಿಕೊಪ್ಪ ಸಮೀಪ ವನ್ಯಪ್ರಾಣಿಗಳ ಹೆಜ್ಜೆ ಗುರುತು ಪತ್ತೆ: ಸಾರ್ವಜನಿಕರಲ್ಲಿ ಆತಂಕ

ಹೊಸದಿಗಂತ ವರದಿ ಸುಂಟಿಕೊಪ್ಪ:

ಇಲ್ಲಿಗೆ ಸಮೀಪದ ಪನ್ಯ ತೋಟದಲ್ಲಿ ಹುಲಿ ಅಥವಾ ಚಿರತೆಯನ್ನು ಹೊಲುವ ಪ್ರಾಣಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೋಟ ಕಾರ್ಮಿಕರಲ್ಲಿ ಅತಂಕ ಉಂಟುಮಾಡಿದೆ.

ತೋಟ ಕಾರ್ಮಿಕರು ಈ ಹೆಜ್ಜೆ ಗುರುತುಗಳನ್ನು ಕಂಡು ಸಂಬಂಧಿಸಿದವರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆಯ ಮಾಹಿತಿಯಂತೆ ಪನ್ಯ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳ ಹಾವಳಿ ಕಂಡುಬರುತ್ತಿದ್ದು, ಅವುಗಳನ್ನು ಬೇಟೆಯಾಡಲು ಚಿರತೆಗಳು ಆ ಪ್ರದೇಶಕ್ಕೆ ಬರುತ್ತಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಆದರೆ, ಪತ್ತೆಯಾಗಿರುವ ಹೆಜ್ಜೆ ಗುರುತುಗಳು ಹುಲಿಯದ್ದೇ ಅಥವಾ ಚಿರತೆಯದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ. ಯಾವುದೇ ಕಾಡುಪ್ರಾಣಿ ಆ ಪ್ರದೇಶದಲ್ಲಿ ಸಂಚರಿಸಿರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಪತ್ರಿಕೆಯೊಂದಿಗೆ ತಮ್ಮ ಅತಂಕವನ್ನು ತೋಡಿಕೊಂಡಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ, ಕಾಡುಪ್ರಾಣಿಯ ಸಂಚಾರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಆಗ್ರಹಿಸಿದ್ದಾರೆ.
ಒಂದು ವೇಳೆ ಕಸ ವಿಲೇವಾರಿ ಘಟಕಕ್ಕೆ ನಾಯಿಗಳನ್ನು ಬೇಟೆಯಾಡಲು ಚಿರತೆ ಬರುವುದು ನಿಜವಾದಲ್ಲಿ ಅರಣ್ಯ ಇಲಾಖೆಯವರು ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಕಸ ವಿಲೇವಾರಿ ಘಟಕದಲ್ಲಿನ ನಾಯಿಗಳ ಹಾವಳಿ ನಿಯಂತ್ರಣಕ್ಕೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು‌ ಒತ್ತಾಯಿಸಿದ್ದಾರೆ.

Must Read