November 6, 2026
Friday, November 6, 2026
spot_img

ತೆರೆಮೇಲೆ ರಾವಣನನ್ನೇ ಕಂಡೆ! ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಬೆರಗಾದ ನಟ ವಿವೇಕ್ ಒಬೆರಾಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಬಿಡುಗಡೆಯಾಗಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದ್ಧೂರಿಯಾಗಿ ಮೂಡಿಬಂದಿರುವ ಈ ಸಿನಿಮಾಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ತೆರೆಯ ಮೇಲೆ ಪ್ರತಿಯೊಬ್ಬ ಕಲಾವಿದರ ಅಭಿನಯವೂ ಕಣ್ಣಿಗೆ ಹಬ್ಬದಂತೆ ಕಾಣಿಸುತ್ತಿದ್ದು, ಸಿನಿಮಾ ನೋಡಿದವರೆಲ್ಲಾ ಚಿತ್ರತಂಡದ ಶ್ರಮವನ್ನು ಕೊಂಡಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಎಲ್ಲರಿಗಿಂತಲೂ ಹೆಚ್ಚು ಗಮನ ಸೆಳೆದಿರುವುದು ನಟ ಯಶ್ ಅವರ ರಾವಣನ ಪಾತ್ರ. ಅವರ ಆರ್ಭಟ, ವೈಭವ ಮತ್ತು ಗಾಂಭೀರ್ಯತೆಯನ್ನು ಕಂಡ ಪ್ರೇಕ್ಷಕರು ಬೆರಗಾಗಿದ್ದಾರೆ. ಸ್ವತಃ ಚಿತ್ರದಲ್ಲಿ ಯಶ್ ಅವರ ಸಹೋದರನಾಗಿ ಅಭಿನಯಿಸಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಟ್ವೀಟ್ ಮಾಡಿ, “ಯಶ್, ನನ್ನ ಸಹೋದರ… ರಾಕಿಯಿಂದ ರಾವಣನವರೆಗೆ ಎಂತಹ ಅದ್ಭುತ ಬೆಳವಣಿಗೆ ನಿಮ್ಮದು! ರಾವಣನ ಪಾತ್ರಕ್ಕೆ ನೀನು ತಂದಿರುವ ಶಕ್ತಿ ಮತ್ತು ಗತ್ತು ಬೇರೆಯದೇ ಲೆವೆಲ್. ರಾವಣನ ಹತ್ತು ತಲೆಗಳು ಮಾತನಾಡುವ ದೃಶ್ಯವಂತೂ ಸೂಪರ್,” ಎಂದು ಯಶ್ ನಟನೆಯನ್ನು ಮನಸಾರೆ ಹೊಗಳಿದ್ದಾರೆ.

ಬರಿ ಯಶ್ ಮಾತ್ರವಲ್ಲದೆ, ಶ್ರೀರಾಮನಾಗಿ ನಟಿಸಿರುವ ರಣ್‌ಬೀರ್ ಕಪೂರ್ ಹಾಗೂ ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಅಭಿನಯಕ್ಕೂ ವಿವೇಕ್ ಫಿದಾ ಆಗಿದ್ದಾರೆ. “ರಾಮನ ಪಾತ್ರವನ್ನು ರಣ್‌ಬೀರ್ ಹೇಗೆ ಮಾಡುತ್ತಾರೋ ಎಂಬ ಅನುಮಾನ ಹಲವರಿಗಿತ್ತು. ಆದರೆ ತೆರೆಯ ಮೇಲೆ ನಾನು ನಿಮ್ಮ ನಿಜವಾದ ಪ್ರತಿಭೆಯನ್ನು ಕಂಡೆ” ಎಂದು ತಿಳಿಸಿದ್ದಾರೆ.

ಅಂತೆಯೇ ಸಾಯಿ ಪಲ್ಲವಿ ಅವರ ಬಗ್ಗೆಯೂ ಟ್ವೀಟ್ ಮಾಡಿರುವ ವಿವೇಕ್, “ಸೀತಾ ಮಾತೆಯ ಮುಗ್ಧತೆ ಮತ್ತು ಪರಿಶುದ್ಧತೆ ನಿಮ್ಮ ಅಭಿನಯದಲ್ಲಿ ಸುಂದರವಾಗಿ ಮೂಡಿಬಂದಿದೆ. ಯುದ್ಧದ ದೃಶ್ಯಗಳಲ್ಲಿ ನಿಮ್ಮ ಚುರುಕುತನ ಕಂಡು ಬೆರಗಾದೆ, ಯೋಧ ರಾಜಕುಮಾರಿ,” ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ‘ರಾಮಾಯಣ’ ಸಿನಿಮಾ ಪ್ರೇಕ್ಷಕರಷ್ಟೇ ಅಲ್ಲದೆ, ಚಿತ್ರರಂಗದ ಗಣ್ಯರ ಮನಸ್ಸನ್ನೂ ಸಂಪೂರ್ಣವಾಗಿ ಗೆದ್ದುಕೊಂಡಿದೆ.

Must Read

Skip to toolbar