November 6, 2026
Friday, November 6, 2026
spot_img

ಮಹಿಳೆಯ ಕೈಕೆಲಸಕ್ಕೆ ಮೆಚ್ಚುಗೆ: ಮೊಮ್ಮಗಳಿಗಾಗಿ 500 ರೂ. ಕೊಟ್ಟು ಮಣಿಗಳ ತೊಟ್ಟಿಲು ಖರೀದಿಸಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸರ್ಕಾರದ ಗ್ಯಾರಂಟಿ ಯೋಜನೆಗಳು ಹಲವು ಕುಟುಂಬಗಳ ಆರ್ಥಿಕ ಬದುಕಿಗೆ ನೆರವಾಗಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ಹಣವನ್ನು ಮಹಿಳೆಯರು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರೆ, ಮತ್ತೆ ಕೆಲವರು ಸಣ್ಣಪುಟ್ಟ ಉಳಿತಾಯ ಹಾಗೂ ಸ್ವಯಂ ಉದ್ಯೋಗಕ್ಕೆ ಬಳಸಿಕೊಂಡಿದ್ದಾರೆ.

ಹೀಗೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ಯೋಜನೆಯ ಫಲಾನುಭವಿಯೊಬ್ಬರ ಕೈಕೆಲಸಕ್ಕೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದಲೂ ಪ್ರೋತ್ಸಾಹ ಸಿಕ್ಕಿದೆ. ಸುವರ್ಣಮ್ಮ ಎಂಬ ಮಹಿಳೆ ತಯಾರಿಸಿದ ಮಣಿಗಳ ತೊಟ್ಟಿಲನ್ನು ಖರೀದಿಸುವ ಮೂಲಕ ಸಿಎಂ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಣಿಗಳ ತೊಟ್ಟಿಲಿಗೆ ಮನಸೋತ ಸಿಎಂ

ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜತೆ ಇಂದು ಇಟ್ಟುಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಸುವರ್ಣಮ್ಮ ಅವರು ತಾವು ತಯಾರಿಸಿದ್ದ ಗುಲಾಬಿ ಬಣ್ಣದ ಮಣಿಗಳ ಆಟಿಕೆ ತೊಟ್ಟಿಲನ್ನು ಮುಖ್ಯಮಂತ್ರಿಗಳಿಗೆ ತೋರಿಸಿದರು. ಅದರ ವಿನ್ಯಾಸ ಮತ್ತು ಸೌಂದರ್ಯ ಗಮನಿಸಿದ ಡಿ.ಕೆ. ಶಿವಕುಮಾರ್, “ಚೆನ್ನಾಗಿದೆ ಕಣಮ್ಮ, ಈ ತೊಟ್ಟಿಲನ್ನು ನನ್ನ ಮೊಮ್ಮಗಳಿಗೆ ಕೊಡುತ್ತೇನೆ. ಇದರ ಬೆಲೆ ಎಷ್ಟು?” ಎಂದು ಪ್ರೀತಿಯಿಂದ ವಿಚಾರಿಸಿದರು.

ತೊಟ್ಟಿಲು ತಯಾರಿಸಲು ಸುಮಾರು 125 ರೂ ವೆಚ್ಚವಾಗುತ್ತದೆ. ಮಾರುಕಟ್ಟೆಯಲ್ಲಿ ಅದನ್ನು 250ರಿಂದ 300ರವರೆಗೆ ಮಾರಾಟ ಮಾಡುತ್ತೇವೆ ಎಂದು ಸುವರ್ಣಮ್ಮ ವಿವರಿಸಿದರು. ಇದರಿಂದ ತಮಗೆ ಲಾಭ ದೊರೆಯುತ್ತಿದೆ ಎಂದೂ ತಿಳಿಸಿದರು.

ಇದನ್ನೂ ಓದಿ:

ಉಚಿತವಾಗಿ ಪಡೆದುಕೊಳ್ಳಲು ನಿರಾಕರಿಸಿದ ಡಿಕೆಶಿ

ಮುಖ್ಯಮಂತ್ರಿಗಳ ಮಾತಿನಿಂದ ಸಂತಸಗೊಂಡ ಸುವರ್ಣಮ್ಮ, ತೊಟ್ಟಿಲನ್ನು ಗೌರವಪೂರ್ವಕವಾಗಿ ಉಚಿತವಾಗಿ ನೀಡಲು ಮುಂದಾದರು. ಆದರೆ ಇದನ್ನು ಒಪ್ಪದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಜೇಬಿನಿಂದ 500 ತೆಗೆದು ಸುವರ್ಣಮ್ಮ ಅವರ ಕೈಗೆ ನೀಡಿದರು. ಬಳಿಕ ತೊಟ್ಟಿಲನ್ನು ಕೈಯಲ್ಲಿ ಹಿಡಿದು ಅದರ ವಿನ್ಯಾಸವನ್ನು ಪರಿಶೀಲಿಸಿ, ಮನೆಗೆ ತೆಗೆದುಕೊಂಡು ಹೋಗುವಂತೆ ತಮ್ಮ ಸಹಾಯಕ ಸಿಬ್ಬಂದಿಗೆ ನೀಡಿದರು.

ಕೈಕೆಲಸಕ್ಕೆ ಸಿಕ್ಕ ಪ್ರೋತ್ಸಾಹ

ತಮ್ಮ ಕೈಯಾರೆ ತಯಾರಿಸಿದ ಕಲಾಕೃತಿಗೆ ಮುಖ್ಯಮಂತ್ರಿಗಳಿಂದ ಮೆಚ್ಚುಗೆ ಹಾಗೂ ಹಣದ ರೂಪದಲ್ಲಿ ಪ್ರೋತ್ಸಾಹ ದೊರೆತಿದ್ದಕ್ಕೆ ಸುವರ್ಣಮ್ಮ ಸಂತಸ ವ್ಯಕ್ತಪಡಿಸಿದರು.

Must Read

Skip to toolbar