November 6, 2026
Friday, November 6, 2026
spot_img

ರಣಬೀರ್ ನಟನೆಯಲ್ಲಿ ದೈವತ್ವ ಕಂಡೆ: ‘ರಾಮಾಯಣ’ ನೋಡಿ ಕಣ್ಣೀರಿಟ್ಟ ಮಾವ ಮಹೇಶ್ ಭಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ದೇಶಾದ್ಯಂತ ಭಾರಿ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಆದರೆ, ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ರಣಬೀರ್ ಕಪೂರ್‌ಗೆ ಅತ್ಯಂತ ವಿಶೇಷವಾದ ಶಹಬ್ಬಾಸ್‌ಗಿರಿ ಸಿಕ್ಕಿರುವುದು ಅವರ ಸ್ವಂತ ಕುಟುಂಬದಿಂದ. ಹೌದು, ರಣಬೀರ್ ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರು ಈ ಸಿನಿಮಾವನ್ನು ನೋಡಿ ಅತ್ಯಂತ ಭಾವುಕರಾಗಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ‘ರಾಮಾಯಣ’ ಚಿತ್ರದ ಅನುಭವವನ್ನು ಹಂಚಿಕೊಂಡ ಮಹೇಶ್ ಭಟ್, ಶ್ರೀರಾಮ 14 ವರ್ಷಗಳ ವನವಾಸಕ್ಕೆ ಹೋಗುವ ದೃಶ್ಯವನ್ನು ನೆನೆದು ಭಾವುಕರಾದರು. “ಸಿನಿಮಾದ ಮಧ್ಯಂತರಕ್ಕೂ ಮುನ್ನ ಬರುವ ಶ್ರೀರಾಮನ ವನವಾಸದ ದೃಶ್ಯವನ್ನು ನೋಡುವಾಗ ನನ್ನ ಗಂಟಲು ಬಿಗಿಹಿಡಿದಂತಾಯಿತು. ಅಳಬಾರದು ಎಂದು ಎಷ್ಟೇ ನಿಯಂತ್ರಿಸಿಕೊಂಡರೂ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ನನ್ನ ಜೊತೆ ಯುವ ಬರಹಗಾರರು ಮತ್ತು ನಿರ್ದೇಶಕರಿದ್ದರು. ಥಿಯೇಟರ್‌ನಲ್ಲಿ ಬೆಳಕು ಬಂದಾಗ ನನ್ನ ಕಣ್ಣೀರನ್ನು ಮುಚ್ಚಿಡಲು ಯತ್ನಿಸಿದೆ, ಆದರೆ ಆಗಲಿಲ್ಲ. ದೊಡ್ಡ ಅನುಭವಗಳು ನಮ್ಮನ್ನು ಮೌನವಾಗಿಸಿಬಿಡುತ್ತವೆ” ಎಂದು ಅವರು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ರಣಬೀರ್ ಕಪೂರ್ ಅವರ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ ಮಹೇಶ್ ಭಟ್, “ರಣಬೀರ್ ಕ್ಯಾಮೆರಾ ಮುಂದೆ ಬಂದು ಕೈಮುಗಿದು ನಿಂತಾಗ, ಅವರು ತಮ್ಮೊಳಗಿನ ದೈವತ್ವವನ್ನು ಸ್ಪರ್ಶಿಸಿದ್ದಾರೆ ಎನಿಸಿತು. ಅವರ ಹಿಂದಿನ ಯಾವುದೇ ಸಿನಿಮಾಗಳಲ್ಲೂ ಕಾಣಿಸದ ಹೊಸ ಚೈತನ್ಯ ಮತ್ತು ತೀವ್ರತೆ ಈ ಪಾತ್ರದಲ್ಲಿ ವ್ಯಕ್ತವಾಗಿದೆ. ಇಡೀ ಕುಟುಂಬ ರಾಮನ ಸುತ್ತ ಸೇರುವ ಆ ದೃಶ್ಯ ಪ್ರತಿಯೊಬ್ಬರ ಹೃದಯ ತಟ್ಟುತ್ತದೆ” ಎಂದಿದ್ದಾರೆ.

ಇನ್ನು ರಾಮನ ಪಾತ್ರದ ಜೊತೆಗೆ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೂ ಮಹೇಶ್ ಭಟ್ ಫಿದಾ ಆಗಿದ್ದಾರೆ. “ರಾವಣನಾಗಿ ಯಶ್ ತಮ್ಮ ಅದ್ಭುತ ನಟನೆಯಿಂದ ನನ್ನನ್ನು ಮಂತ್ರಮುಗ್ಧಗೊಳಿಸಿದರು. ನಿರ್ದೇಶಕ ನಿತೀಶ್ ತಿವಾರಿ ಅವರು ರಾಮ ಮತ್ತು ರಾವಣ ಇಬ್ಬರ ಪಾತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ, ಅಷ್ಟೇ ಶಕ್ತಿಯುತವಾಗಿ ತೆರೆಯ ಮೇಲೆ ತಂದಿದ್ದಾರೆ” ಎಂದು ಮಹೇಶ್ ಭಟ್ ಪ್ರಶಂಸಿಸಿದ್ದಾರೆ.

ಒಟ್ಟಿನಲ್ಲಿ, ‘ರಾಮಾಯಣ’ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಜೊತೆಗೆ ಹಿರಿಯ ದಿಗ್ಗಜರ ಮೆಚ್ಚುಗೆಗೂ ಪಾತ್ರವಾಗಿ ದೊಡ್ಡ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ.

Must Read

Skip to toolbar