ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಮೆಟ್ರೋ ಗುಲಾಬಿ ಮಾರ್ಗವನ್ನು ಉದ್ಘಾಟಿಸಲು ನವೆಂಬರ್ 13 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವರು ಪ್ರಧಾನಿಯನ್ನು ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಬಿಜೆಪಿಯವರಿಗೂ ಇದಕ್ಕೂ ಏನು ಸಂಬಂಧ? ಎಂದು ಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಜನರ ದುಡ್ಡು. ನಾವು ಸಾಲವನ್ನು ಪಡೆದು ಮೆಟ್ರೋ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆಲವು ವಿಚಾರಗಳನ್ನು 13 ರಂದು ಪ್ರಧಾನಿಗಳ ಮುಂದೆ ಮಂಡಿಸಲಿದ್ದೇನೆ ಎಂದರು.
ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣ
ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಪಿಸಿಸಿ ಅಧ್ಯಕ್ಷರನ್ನು ಹಾಗೂ ಸಿ ಎಲ್ ಪಿ ನಾಯಕರನ್ನು ಸಂಜೆ ಸಭೆಗೆ ಕರೆದಿದ್ದಾರೆ. ಒಂದೂವರೆ ಗಂಟೆಗಳ ಕಾಲ ಸಭೆ ನಡೆಯಲಿದ್ದು, ಹೀಗಾಗಿ ದೆಹಲಿಗೆ ತೆರಳುತ್ತಿದ್ದೇನೆ. ದೀಪಾವಳಿ ಹಬ್ಬವಿರುವುದರಿಂದ ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡುತ್ತಿಲ್ಲ ಎಂದರು.
ಕಬ್ಬು ಬೆಳೆಗಾರರ ಹೋರಾಟ ವಾಪಸ್ಸು
ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿರುವ ಬಗ್ಗೆ ಕೇಳಿದಾಗ ನಾವು ರೈತರಿಗೆ ಮನವಿ ಮಾಡಿದ್ದೆವು, ಇದರಲ್ಲಿ ಪ್ರತಿಷ್ಠೆ ಬೇಡ. ಇಂದು ಸಕ್ಕರೆ ಕಾರ್ಖಾನೆಗಳು ಹಾಗೂ ನಮ್ಮ ಸಚಿವರು ಕುಳಿತು ಚರ್ಚಿಸಿದ್ದಾರೆ. ಕೆಲವರು ಕಬ್ಬು ಅರೆಯಲು ಅನುಮತಿ ನೀಡಿ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮೊರೆಯನ್ನು ಹೋಗಿದ್ದಾರೆ. ಅದಕ್ಕೂ ಇಂದು ಅಫಿಡವಿಟ್ ಹಾಕಲಾಗುತ್ತಿದೆ ಎಂದರು.
ಪ್ರಧಾನಿಗಳ ಬಳಿ ಸಕ್ಕರೆ ಬೆಲೆ ನಿಗದಿ ಮಾಡುವ ಬಗ್ಗೆ ಪ್ರಸ್ತಾಪ
ಕೇಂದ್ರ ಸರ್ಕಾರದವರು ಸಕ್ಕರೆ ಬೆಲೆಯನ್ನು ನಿಗದಿ ಮಾಡಬೇಕು. ಈ ಬಗ್ಗೆಯೂ ಪ್ರಧಾನಿಗಳ ಬಳಿ ಪ್ರಸ್ತಾಪಿಸಿ ಪತ್ರವನ್ನು ಬರೆಯಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದರು.
ರೈತರಿಗೆ ಅಗೌರವ ತೋರಿಸಬಾರದು
ಸಮಸ್ಯೆ ಇತ್ಯರ್ಥವಾಗದಿದ್ದರೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸರ್ಕಾರವನ್ನು ಹೆದರಿಸುವುದು ಸರಿಯಲ್ಲ. ಸ್ವಲ್ಪ ಸೌಜನ್ಯತೆ ಇರಬೇಕು. ಏ ಬಾರೋ ಇಲ್ಲಿ ಎಂದು ಕರೆಯುವುದು ರೈತರಿಗೆ ಅಗೌರವವಾದಂತೆ. ಇಂಥದ್ದು ಆಗಬಾರದು ಎಂದರು
ಕನಕಪುರಕ್ಕೆ ಬರುತ್ತೇನೆ
ಕನಕಪುರಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಿದಾಗ ಮೂರು ನಾಲ್ಕು ದಿನ ಬಿಟ್ಟು ಬರುತ್ತೇನೆ ಎಂದರು.



