ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾದ ಘಟನೆ ಪಂಜಾಬ್ನ ಸರಾಯ್ ಬಂಜಾರಾ ರೈಲು ನಿಲ್ದಾಣದ ಸಮೀಪ ಶುಕ್ರವಾರ ನಡೆದಿದೆ.
ಅಮೃತಸರದಿಂದ ನ್ಯೂ ಜಲ್ಪೈಗುರಿಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ.
ನಾಲ್ಕು ಬೋಗಿಗಳಿಗೆ ವ್ಯಾಪಿಸಿದ ಬೆಂಕಿ
ರೈಲು ಸಂಖ್ಯೆ 12508ರ ಕರ್ಮಭೂಮಿ ಎಕ್ಸ್ಪ್ರೆಸ್ನ ಎಂಜಿನ್ನಿಂದ ಐದನೇ ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಬಳಿಕ ಬೆಂಕಿ ನಾಲ್ಕು ಬೋಗಿಗಳಿಗೆ ವ್ಯಾಪಿಸಿದೆ. ರೈಲಿನ ಹಲವು ಬೋಗಿಗಳಿಂದ ದಟ್ಟ ಹೊಗೆ ಹಾಗೂ ಜ್ವಾಲೆಗಳು ಮೇಲಕ್ಕೆ ಚಿಮ್ಮುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಗಾಬರಿಗೊಂಡಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:
ಶಾರ್ಟ್ ಸರ್ಕ್ಯೂಟ್ ಶಂಕೆ
ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಮೂಲಗಳು ಶಂಕಿಸಿವೆ. ಆದರೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ರೈಲ್ವೆ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



