November 6, 2026
Friday, November 6, 2026
spot_img

‘ಪೇಸಿಎಂ’ ಅಭಿಯಾನ ನಡೆಸಿದವರೇ ಈಗ ಕಮಿಷನ್ ದಂಧೆಯಲ್ಲಿದ್ದಾರೆ: ಆರ್. ಅಶೋಕ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಜೆಪಿ ಆಡಳಿತದ ವೇಳೆ ಕಾಂಗ್ರೆಸ್ ನಡೆಸಿದ್ದ ‘ಪೇಸಿಎಂ’ ಅಭಿಯಾನವನ್ನು ನೆನಪಿಸಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇದೀಗ ಅದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಫೋನ್‌ಪೇ ಕಮಿಷನ್’ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಡಿಜಿಟಲ್ ಪಾವತಿ ಮೂಲಕ ಲಂಚ ಪಡೆಯಲಾಗುತ್ತಿದೆ ಎಂದು ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆಡಳಿತದ ಪ್ರಮುಖ ಕಚೇರಿಗಳಲ್ಲೇ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ದೂರಿದ್ದಾರೆ.

‘DCT’ ಹೆಸರಿನಲ್ಲಿ ಹೊಸ ಭ್ರಷ್ಟಾಚಾರ ವ್ಯವಸ್ಥೆ?

ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್‌ಗಳಂತಹ ಆಡಳಿತದ ಕೇಂದ್ರಗಳಲ್ಲೂ ಕಮಿಷನ್ ದಂಧೆ ವ್ಯಾಪಿಸಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಸರ್ಕಾರದ ನೇರ ನಗದು ವರ್ಗಾವಣೆ ವ್ಯವಸ್ಥೆ (DBT)ಯನ್ನು ಉಲ್ಲೇಖಿಸಿ, ‘DCT – Direct Commission Transfer’ ಎಂಬ ಹೊಸ ಡಿಜಿಟಲ್ ಭ್ರಷ್ಟಾಚಾರ ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕ್ಯಾಂಟೀನ್ ಗುತ್ತಿಗೆದಾರರಿಂದ 10 ಲಕ್ಷ ವಸೂಲಿ ಆರೋಪ

ಕ್ಯಾಂಟೀನ್ ಗುತ್ತಿಗೆದಾರರಿಂದ ಫೋನ್‌ಪೇ ಮೂಲಕ 10 ಲಕ್ಷ ಲಂಚ ವಸೂಲಿ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ, ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಇಂಧನ ವೆಚ್ಚಗಳಿಗೆ ಹಣವಿಲ್ಲ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:

ಅಧಿಕಾರಿಗಳ ವಿರುದ್ಧ ನೋಟಿಸ್ ನೀಡಿದ ಗುತ್ತಿಗೆದಾರರು

ಲಂಚದ ಬೇಡಿಕೆ ಮತ್ತು ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ ಎಂದು ಅಶೋಕ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಲಂಚ ಕೇಳಿದರೆ ನೇರವಾಗಿ ಕರೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದರೂ, ಅಧಿಕಾರಿಗಳು ಫೋನ್‌ಪೇ ಮೂಲಕ ಹಣ ಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ. ಈ ವ್ಯವಹಾರಗಳ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ಇದೆಯೇ ಅಥವಾ ಅವರ ಅನುಮತಿ ಇದೆಯೇ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Must Read

Skip to toolbar