November 6, 2026
Friday, November 6, 2026
spot_img

ನ. 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗ ಉದ್ಘಾಟನೆಯಾಗಲಿದ್ದು, ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಸಂಪರ್ಕ ಸೇರ್ಪಡೆಯಾಗಲಿದೆ.

ಬೆಳಗ್ಗೆಯೇ ಬೆಂಗಳೂರಿಗೆ ಪ್ರಧಾನಿ ಆಗಮನ

ನವೆಂಬರ್ 13ರಂದು ಬೆಳಗ್ಗೆ ದೆಹಲಿಯಿಂದ ಪ್ರಯಾಣ ಆರಂಭಿಸಲಿರುವ ಪ್ರಧಾನಿ ಮೋದಿ, ಬೆಳಗ್ಗೆ 10.05ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ 12.40ಕ್ಕೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ತಲುಪಲಿದ್ದು, 12.45ಕ್ಕೆ ಪಿಂಕ್ ಲೈನ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ನಂತರ ಮೆಟ್ರೋ ರೈಲಿನಲ್ಲಿ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ.

ಐಐಎಂಬಿ ಆಡಿಟೋರಿಯಂನಲ್ಲಿ ಹಲವು ಕಾರ್ಯಕ್ರಮ

ಮಧ್ಯಾಹ್ನ 1.15ಕ್ಕೆ ಐಐಎಂಬಿ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಈ ವೇಳೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು, ಪೂರ್ಣಗೊಂಡ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವುದು ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ:

ಮೈಸೂರಿಗೂ ಪ್ರಧಾನಿ ಭೇಟಿ

ಬೆಂಗಳೂರಿನ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ನಡೆಯುವ ‘ಭಾರತ್ ವ್ಯಾನ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ‘ಮೈಸೂರು ಕಾಸ್ಮೋಸ್’ ಉದ್ಘಾಟಿಸಲಿದ್ದಾರೆ. ಬಳಿಕ ಸಂಜೆ 6.05ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮೆಟ್ರೋ ಪ್ರಯಾಣಿಕರ ನಿರೀಕ್ಷೆಗೆ ತೆರೆ

ಪಿಂಕ್ ಲೈನ್ ಉದ್ಘಾಟನೆಯಿಂದ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಹೊಸ ಮಾರ್ಗ ಸೇರ್ಪಡೆಯಾಗಲಿದೆ. ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ವಿಸ್ತರಿಸುವ ಪ್ರಯತ್ನಕ್ಕೆ ಈ ಯೋಜನೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನಗರದ ಕಾರ್ಯಕ್ರಮಗಳ ಸಿದ್ಧತೆಗಳೂ ಮಹತ್ವ ಪಡೆದುಕೊಂಡಿವೆ.

Must Read

Skip to toolbar