November 6, 2026
Friday, November 6, 2026
spot_img

12 ದಿನಗಳ ಹೋರಾಟಕ್ಕೆ ಮೊದಲ ಜಯ: 3,600 ರೂ. ಕಬ್ಬಿನ ದರಕ್ಕೆ ಒಪ್ಪಿಗೆ, ಗುರ್ಲಾಪುರದಲ್ಲಿ ರೈತರ ಸಂಭ್ರಮ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಸತತ 12 ದಿನಗಳ ಕಾಲ ನಡೆದ ರೈತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಶುಕ್ರವಾರ ವಿಜಯೋತ್ಸವ ಆಚರಿಸಿದರು.

ಹೋರಾಟದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ರೈತರು, ರೈತಪರ ಘೋಷಣೆಗಳನ್ನು ಮೊಳಗಿಸಿದರು. ರೈತ ಮುಖಂಡ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ವಿಜಯೋತ್ಸವಕ್ಕೆ ಆಚರಿಸಿದರು.

ರೈತರ ಹೋರಾಟಕ್ಕೆ ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿಪಡಿಸುವುದರ ಜತೆಗೆ ಸಕ್ಕರೆ ಮಾರಾಟದಿಂದ ಬರುವ ಲಾಭಾಂಶದಲ್ಲಿ ಶೇ.75ರಷ್ಟು ಪಾಲನ್ನು ರೈತರಿಗೆ ನೀಡಲು ಒಪ್ಪಂದವಾಗಿದೆ. ಇದರಿಂದ ರೈತರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಇದು ಹೋರಾಟದ ಅಂತಿಮ ಜಯವಲ್ಲ, ಪ್ರತಿ ಟನ್ ಕಬ್ಬಿಗೆ ಸರ್ಕಾರ ಹೆಚ್ಚುವರಿಯಾಗಿ 1,000 ಪ್ರೋತ್ಸಾಹಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಬೆಳಗಾವಿಯಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದೊಳಗೆ ಬೇಡಿಕೆ ಈಡೇರಿಸದಿದ್ದರೆ ಅಧಿವೇಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ರೈತ ಮುಖಂಡರು ಎಚ್ಚರಿಕೆ ನೀಡಿದರು. ವಿಜಯೋತ್ಸವದದಲ್ಲಿ ನೂರಾರು ರೈತರು, ರೈತ ಮುಖಂಡರು‌, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

Must Read

Skip to toolbar