November 6, 2026
Friday, November 6, 2026
spot_img

ಕಳ್ಳತನ ಪ್ರಕರಣ: 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಕದ್ದಿದ್ದ ಇಬ್ಬರು ಮಹಿಳೆಯರು ಅರೆಸ್ಟ್

ಹೊಸದಿಗಂತ ವರದಿ ಮುಂಡಗೋಡ:

ಗ್ರಾಹಕರ ಸೋಗಿನಲ್ಲಿ ಜ್ಯುವೆಲರ್ಸ್ ಅಂಗಡಿಗೆ ಪ್ರವೇಶಿಸಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬೆಳ್ಳಿ ಆಭರಣ ಕದ್ದಿದ್ದ ಇಬ್ಬರು ಅಂತರಜಿಲ್ಲಾ ಮಹಿಳೆಯರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 1.30 ಲಕ್ಷ ಮೌಲ್ಯದ 700 ಗ್ರಾಂ ತೂಕದ ನಾಲ್ಕು ಜೋಡಿ ಬೆಳ್ಳಿಯ ಕಾಲು ಗೆಜ್ಜೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ (ಕೆ.ಎಚ್.) ನಿವಾಸಿಗಳಾದ ಶಾಂತಾ ಮದನ ಪೂಜಾರಿ (52) ಮತ್ತು ಶಾಂತಾ ಮೂರ್ತಿ ಅಂಗಡಿ (46) ಎಂದು ಗುರುತಿಸಲಾಗಿದೆ.

ಕಳೆದ ಅಕ್ಟೋಬರ್ 17ರಂದು ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜ್ಯುವೆಲರ್ಸ್‌ಗೆ ಬಂದಿದ್ದ ಇಬ್ಬರು ಮಹಿಳೆಯರು, ಅಂಗಡಿಯಲ್ಲಿದ್ದವರ ಗಮನವನ್ನು ಬೇರೆಡೆ ಸೆಳೆದು 700 ಗ್ರಾಂ ತೂಕದ ಬೆಳ್ಳಿಯ ಕಾಲು ಗೆಜ್ಜೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:

ವಿಶೇಷ ತಂಡದಿಂದ ಕಾರ್ಯಾಚರಣೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಸಿಪಿಐ ರಮೇಶ ಹಾನಾಪೂರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಳಗಾವಿ ಮೂಲದ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅವರಿಂದ ಕಳುವಾಗಿದ್ದ ಬೆಳ್ಳಿ ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ

ಕಾರ್ಯಾಚರಣೆಯಲ್ಲಿ ಸಿಪಿಐ ರಮೇಶ ಹಾನಾಪೂರ, ಪಿಎಸ್‌ಐ ಮಂಜುನಾಥ ಗೌಡರ, ಪ್ರೊಬೇಷನರಿ ಪಿಎಸ್‌ಐ ನಿಂಗರಾಜ ಕರಡಿಗುದ್ದಿ, ಎಎಸ್‌ಐ ಸೋಮಶೇಖರ ಮೇತ್ರಿ ಸೇರಿದಂತೆ ಅಪರಾಧ ವಿಭಾಗದ ಸಿಬ್ಬಂದಿ ಮಂಜಪ್ಪ ಚಿಂಚಲಿ, ಶಿವಾನಂದ ದಾನಣ್ಣನವರ ಮತ್ತು ರೇಖಾ ಹುಚ್ಚೆಣ್ಣನವರ ಭಾಗವಹಿಸಿದ್ದರು. ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Must Read

Skip to toolbar