ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಬಾದ್ಷಾ ಶಾರುಖ್ ಖಾನ್ ಹಾಗೂ ಗ್ಲಾಮರಸ್ ನಟಿ ದೀಪಿಕಾ ಪಡುಕೋಣೆ ಜೋಡಿಯ ಮುಂಬರುವ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮೊದಲೇ ದೊಡ್ಡ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಚಿತ್ರದ ಹಾಡೊಂದರಲ್ಲಿ ನಾಯಕಿ ಧರಿಸಿರುವ ಬಟ್ಟೆಯ ಬಣ್ಣವು ಸದ್ಯ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿತ್ರದ ‘ತು ಮಿಲ್ ಜಾಯೆ’ ಎನ್ನುವ ಹಾಡಿನಲ್ಲಿ ಅತಿಯಾದ ವಿಎಫ್ಎಕ್ಸ್ ಬಳಕೆಯಾಗಿದೆ ಎಂದು ಈಗಾಗಲೇ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ, ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಉಡುಗೆಯು ಹೊಸ ವಿವಾದಕ್ಕೆ ಮುನ್ನುಡಿ ಬರೆದಿದೆ. ಇದು ಸನಾತನ ಧರ್ಮ ಹಾಗೂ ಹಿಂದೂ ಸಂಸ್ಕೃತಿಗೆ ಮಾಡುವ ಅಪಮಾನ ಎಂದು ಕೆಲ ಮುಖಂಡರು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ.
ದೆಹಲಿಯ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಅವರು ನಟ ಶಾರುಖ್ ಖಾನ್ ಹಾಗೂ ಚಿತ್ರತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಟ್ಟೆಯು ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ಅವರು ಕಿಡಿಕಾರಿದ್ದಾರೆ. ಒಂದು ವೇಳೆ ಸಿನಿಮಾ ಬಿಡುಗಡೆಗೂ ಮುನ್ನ ಈ ಬಣ್ಣವನ್ನು ಬದಲಾಯಿಸದಿದ್ದರೆ, ದೇಶಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಚಿತ್ರತಂಡಕ್ಕೆ ಗಡುವು ನೀಡಿದ್ದಾರೆ.
ಶಾರುಖ್ ಖಾನ್ ಅವರೇ ನಟಿಸಿದ್ದ ‘ಪಠಾಣ್’ ಸಿನಿಮಾದ ‘ಬೇಶರಮ್ ರಂಗ್’ ಹಾಡಿನ ಬಿಡುಗಡೆ ಸಮೆಯದಲ್ಲೂ ಇದೇ ರೀತಿಯ ಕೇಸರಿ ಬಣ್ಣದ ಬಿಕಿನಿ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದನ್ನು ಶಾಸಕರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ. ಅದೇ ರೀತಿಯ ಘಟನೆ ‘ಕಿಂಗ್’ ಸಿನಿಮಾದಲ್ಲೂ ಮರುಕಳಿಸಿದರೆ, ಚಿತ್ರತಂಡವು ಭಾರಿ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ರವಾನಿಸಲಾಗಿದೆ.
ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಗೌರಿ ಖಾನ್ ಹಾಗೂ ಮಮತಾ ಆನಂದ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಲಾಂಚ್ನಲ್ಲಿ ತಯಾರಾಗುತ್ತಿರುವ ಈ ಚಿತ್ರವು ಈ ವರ್ಷದ ಡಿಸೆಂಬರ್ 24ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಆದರೆ, ಬಿಡುಗಡೆಗೂ ಮುನ್ನವೇ ಭುಗಿಲೆದ್ದಿರುವ ಈ ವಿವಾದವು ಚಿತ್ರದ ಬಾಕ್ಸ್ ಆಫೀಸ್ ಹಾಗೂ ಪ್ರಚಾರದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.



