ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಟದ ನೆಪದಲ್ಲಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯನ್ನು ಕೊಲೆ ಮಾಡಿರುವ ಆರೋಪಿ ಇಂದುಶೇಖರ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ ಒಂದು ಮೆಸೇಜ್ ಕಳಿಸಿದ್ದೇ ಪೊಲೀಸರ ಹಾಗೂ ಮನೆಯವರ ಅನುಮಾನಕ್ಕೆ ಕಾರಣವಾಗಿದೆ. ಹತ್ಯೆಯಾದ ಶಂಕರ್ ಫೋನ್ಗೆ ಅವರ ಸ್ನೇಹಿತರು ಮೆಸೇಜ್ ಮಾಡಿದ್ದರು. ರಿಪ್ಲೇ ಮಾಡದಿದ್ದರೆ ಅನುಮಾನ ಬಂದೀತು ಎನ್ನುವ ಕಾರಣ ಇಂದುಶೇಖರ ಕನ್ನಡದಲ್ಲಿಯೇ ಎಲ್ಲ ಮೆಸೇಜ್ಗಳಿಗೆ ಉತ್ತರ ನೀಡಿದ್ದಾನೆ. ಇದು ಸ್ನೇಹಿತರ ಅನುಮಾನಕ್ಕೆ ಕಾರಣವಾಗಿದೆ.
ಸದಾ ಇಂಗ್ಲಿಷ್ನಲ್ಲಿ ಮೆಸೇಜ್ ಮಾಡುವ ಶಂಕರ್ ಇಂದು ಅಚಾನಕ್ಕಾಗಿ ಕನ್ನಡದಲ್ಲಿ ಮೆಸೇಜ್ ಮಾಡಿದ್ದು ಏಕೆ ಎನ್ನುವ ಅನುಮಾನ ಸ್ನೇಹಿತರಲ್ಲಿ ಮೂಡಿದೆ. ತದನಂತರ ನಂಬರ್ಗೆ ಕರೆ ಮಾಡಿದರೆ ಸ್ವಿಚ್ಆಫ್ ಆಗಿದೆ. ಮನೆಯ ಬಳಿ ಇಲ್ಲ. ಟ್ರಿಪ್ ಹೋಗಿದ್ದಾರೆ ಎಂದು ಇಂದುಶೇಖರ ಹೇಳುತ್ತಿದ್ದಾನೆ ಇದೆಲ್ಲವೂ ತುಂಬಾ ಗೊಂದಲವಾಗಿದೆ ಎಂದು ನಿರ್ಧರಿಸಿ ನಳಿನಿ ಅವರ ತಾಯಿಗೆ ಪೊಲೀಸರಿಗೆ ದೂರು ನೀಡಿ ಎಂದು ಸ್ನೇಹಿತರು ಹೇಳಿದ್ದಾರೆ. ಇದೇ ಕಾರಣಕ್ಕೆ ನಳಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ ಪೊಲೀಸರು ಫೋನ್ ನೆಟ್ವರ್ಕ್ ಟ್ರೇಸ್ ಮಾಡಿದಾಗ ಎಲ್ಲರ ಫೋನ್ಗಳು ಇಂದುಶೇಖರನ ಮನೆಯ ಲೊಕೇಷನ್ನ್ನು ತೋರಿಸಿವೆ. ಮನೆಯಲ್ಲಿ ಹುಡುಕಾಟ ನಡೆಸಿದಾಗ ಕೊಲೆಗೆ ಬಳಸಿದ ವಸ್ತುಗಳು, ಸಾಕ್ಷ್ಯಗಳು ಲಭ್ಯವಾಗಿದೆ. ಕನ್ನಡದಲ್ಲಿ ಕಳಿಸಿದ ಒಂದು ಮೆಸೇಜ್ನ ಜಾಡು ಹಿಡಿದು ಇಂದುಶೇಖರನನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಆರೋಪಿ ಹೂತುಹಾಕಿರುವ ಮೂರು ಮೃತದೇಹಗಳು ಪತ್ತೆಯಾಗಿದ್ದು, ಇನ್ನು ನಾಲ್ಕು ದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.



