November 7, 2026
Saturday, November 7, 2026
spot_img

ನನ್ನ ಬಯೋಪಿಕ್ ಬಂದ್ರೆ ಹಲವರ ನಿದ್ದೆ ಗೆಡುತ್ತೆ! ನಟ ಸಲ್ಮಾನ್ ಖಾನ್ ಮಾರ್ಮಿಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂಬರುವ ‘ಮಾತೃಭೂಮಿ: ಮೇ ವಾ‌ರ್ ರೆಸ್ಟ್ ಇನ್ ಪೀಸ್’ ಸಿನಿಮಾದ ಟ್ರೇಲರ್ ಅನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ನೀಡಿದ ಕೆಲ ಸ್ವಾರಸ್ಯಕರ ಉತ್ತರಗಳು ಹಾಗೂ ವಿಚಾರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಕಾರ್ಯಕ್ರಮದಲ್ಲಿ ಮಾಧ್ಯಮದವರು, “ನಿಮ್ಮ ಜೀವನದ ಕುರಿತು ಬಯೋಪಿಕ್ ಬರುವ ಸಾಧ್ಯತೆ ಇದೆಯಾ?” ಎಂದು ಪ್ರಶ್ನಿಸಿದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ನಗುತ್ತಾ ಉತ್ತರಿಸಿದ ಸಲ್ಲು, “ನನ್ನ ಜೀವನದಲ್ಲಿ ಸಿನಿಮಾ ಮಾಡುವಷ್ಟು ದೊಡ್ಡ ವಿಷಯಗಳೇನೂ ಇಲ್ಲ. ಆದರೆ, ಒಂದು ವೇಳೆ ನಿಜವಾದ ಬಯೋಪಿಕ್ ಅಂತ ಮಾಡಿದರೆ, ಅನೇಕ ಜನರ ನಿದ್ದೆ ಗೆಡುವುದು ಖಂಡಿತ!” ಎಂದು ತಮಾಷೆಯಾಗಿ ಹೇಳುವ ಮೂಲಕ ಇಡೀ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಇದೇ ವೇಳೆ “ನಿಮಗೆ ರಾಮನ ಪಾತ್ರ ಸಿಕ್ಕರೆ ನಟಿಸುತ್ತೀರಾ?” ಎಂಬ ಪ್ರಶ್ನೆಗೂ ಸಲ್ಮಾನ್ ಖಾನ್ ಸ್ವಾರಸ್ಯಕರ ನೆನಪೊಂದನ್ನು ಹಂಚಿಕೊಂಡರು. “ಸುಮಾರು 20 ವರ್ಷಗಳ ಹಿಂದೆ ನಾನು ಮತ್ತು ನನ್ನ ಸಹೋದರ ಸೊಹೇಲ್ ಖಾನ್ ರಾಮಾಯಣ ಆಧಾರಿತ ಸಿನಿಮಾ ಮಾಡಲು ಯೋಜಿಸಿದ್ದೆವು. ಅದನ್ನು ಘೋಷಿಸಿದ ಮರುದಿನವೇ ಮಾಧ್ಯಮಗಳು ನಮಗೆ ಓರೆಯಾದ ಕಿರೀಟ ತೊಡಿಸಿ ‘ಇವರೇ ನೋಡಿ ನಮ್ಮ ರಾಮ-ಲಕ್ಷ್ಮಣರು’ ಎಂದು ಬರೆದವು. ಅದನ್ನು ನೋಡಿ ನಾವು ಆ ಸಿನಿಮಾವನ್ನು ಅಲ್ಲೇ ಕೈಬಿಟ್ಟೆವು!” ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಸಲ್ಮಾನ್ ಖಾನ್ ಅಭಿನಯದ ‘ಸಿಕಂದರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತ್ತು. ಹೀಗಾಗಿ ಅವರ ಅಭಿಮಾನಿಗಳು ‘ಮಾತೃಭೂಮಿ’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೆಲವು ವಿಎಫ್‌ಎಕ್ಸ್ ಕೆಲಸಗಳು ಬಾಕಿ ಇರುವ ಕಾರಣ, ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವು ಡಿಸೆಂಬರ್ 4, 2026 ರಂದು ತೆರೆಕಾಣಲಿದ್ದು, ಶ್ರದ್ಧಾ ಕಪೂರ್ ಅವರ ‘ಈಥಾ’ ಚಿತ್ರದೊಂದಿಗೆ ಚಿತ್ರಮಂದಿರಗಳಲ್ಲಿ ಪೈಪೋಟಿ ನಡೆಸಲಿದೆ.

Must Read