ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಆರಂಭವಾಗುತ್ತಿದ್ದಂತೆ ತಾಯಂದಿರ ಮನಸ್ಸಿನಲ್ಲಿ ಒಂದು ಸಾಮಾನ್ಯ ಪ್ರಶ್ನೆ ಮೂಡುತ್ತದೆ “ನಮ್ಮ ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣು ತಿನ್ನಿಸಬಹುದೇ? ಇದರಿಂದ ಶೀತ ಅಥವಾ ಕೆಮ್ಮು ಆಗುವುದಿಲ್ಲವೇ?” ಎಂಬ ಅನುಮಾನಗಳಿರುತ್ತದೆ. ಬಾಳೆಹಣ್ಣು ತಂಪಾದ ಗುಣ ಹೊಂದಿದೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ನಿಜಾಂಶವೇ ಬೇರೆ. ಚಳಿಗಾಲದಲ್ಲೂ ಮಕ್ಕಳಿಗೆ ಬಾಳೆಹಣ್ಣು ನೀಡುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ರೋಗನಿರೋಧಕ ಶಕ್ತಿ
ಚಳಿಗಾಲದಲ್ಲಿ ಮಕ್ಕಳಿಗೆ ನೆಗಡಿ, ಜ್ವರ ಮತ್ತು ಶೀತ ಬಾಧಿಸುವುದು ಸಾಮಾನ್ಯ. ಬಾಳೆಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ ‘ಬಿ6’ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಶೀತ-ಕೆಮ್ಮಿನಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ದಿನವಿಡೀ ಓಡಾಡುವ ಮಕ್ಕಳಿಗೆ ಇದು ತ್ವರಿತ ಶಕ್ತಿಯನ್ನು ನೀಡುತ್ತದೆ.
ಹೊಟ್ಟೆಯ ಆರೋಗ್ಯ
ಚಳಿಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ಮಂದವಾಗಬಹುದು. ಬಾಳೆಹಣ್ಣಿನಲ್ಲಿರುವ ನಾರು ಅಂಶವು ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ, ಮಲಬದ್ಧತೆಯ ಸಮಸ್ಯೆಯನ್ನು ದೂರವಿಡುತ್ತದೆ. ಹೊಟ್ಟೆಗೆ ಹಗುರವಾಗಿರುವ ಕಾರಣ ಇದು ಮಕ್ಕಳಿಗೆ ಅತ್ಯುತ್ತಮ ಆಹಾರವಾಗಿದೆ.
ಪೋಷಕರು ಗಮನಿಸಬೇಕಾದ ಮುನ್ನೆಚ್ಚರಿಕೆಗಳು
ಬಾಳೆಹಣ್ಣು ಆರೋಗ್ಯಕರವಾದರೂ, ಚಳಿಗಾಲದಲ್ಲಿ ಇದನ್ನು ತಿನ್ನಿಸುವಾಗ ಕೆಲವು ಎಚ್ಚರಿಕೆಗಳನ್ನು ವಹಿಸುವುದು ಅವಶ್ಯಕ.
ಫ್ರಿಡ್ಜ್ನಲ್ಲಿಟ್ಟ ತಣ್ಣಗಾದ ಬಾಳೆಹಣ್ಣನ್ನು ನೇರವಾಗಿ ಮಕ್ಕಳಿಗೆ ತಿನ್ನಿಸಬೇಡಿ.
ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ನೀಡುವುದನ್ನು ತಪ್ಪಸಿದರೆ ಒಳ್ಳೆಯದು. ಇದು ಕೆಲವೊಮ್ಮೆ ಶೀತಕ್ಕೆ ಕಾರಣವಾಗಬಹುದು.
ಮಧ್ಯಾಹ್ನದ ವೇಳೆ ಅಥವಾ ಬೆಳಗಿನ ಉಪಾಹಾರದೊಂದಿಗೆ ಇದನ್ನು ನೀಡುವುದು ಅತ್ಯಂತ ಸುರಕ್ಷಿತ.
ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನೀಡಿದರೆ, ಬಾಳೆಹಣ್ಣು ಚಳಿಗಾಲದಲ್ಲಿ ನಿಮ್ಮ ಮಗುವಿನ ಆರೋಗ್ಯದ ನಿಜವಾದ ರಕ್ಷಕ.



