ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ನ.11ರವರೆಗೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ, ಪಾದಯಾತ್ರೆಯನ್ನು ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ದೀಪಾವಳಿ ಜಾತ್ರೆಯಲ್ಲಿ ಭಾಗಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಾರೆ. ಜನ ಹೆಚ್ಚಾದಂತೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡು ಪ್ರಾಣಿಗಳು ಅಟ್ಯಾಕ್ ಮಾಡಿದರೆ ನಿಯಂತ್ರಣ ಕಷ್ಟವಾಗುತ್ತದೆ. ಯಾವುದೇ ರೀತಿಯ ಅನಾಹುತಗಳು ಸಂಭವಿಸಬಾರದು ಎನ್ನುವ ಕಾರಣಕ್ಕೆ ಇಂದಿನಿಂದ ಬೆಳಗ್ಗೆ ಆರರಿಂದ ಸಂಜೆ ಏಳರವರೆಗೆ ಭಕ್ತರ ಪಾದಯಾತ್ರೆ, ಕಾಲ್ನಡಿಗೆ ಮೂಲಕ ತೆರಳುವುದನ್ನು ನಿಷೇಧಿಸಲಾಗಿದೆ.
ಕಳೆದ ಬಾರಿ ಪಾದಯಾತ್ರೆ ವೇಳೆ ಚಿರತೆ ದಾಳಿ ನಡೆಸಿ ಮಂಡ್ಯ ಮೂಲದ ಪಾದಯಾತ್ರಿ ಸಾವನ್ನಪ್ಪಿದ್ದರು. ಅಲ್ಲದೇ ಚನ್ನಪಟ್ಟಣ ಮೂಲದ ಬಾಲಕನಿಗೆ ಗಾಯವಾಗಿತ್ತು. ನಂತರ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುತ್ತಿದ್ದ ಬಾಲಕನನ್ನು ಚಿರತೆ ಕೊಂದು ಹಾಕಿತ್ತು. ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ,ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಇದೀಗ ಪಾದಯಾತ್ರೆಗೆ ಬ್ರೇಕ್ ಹಾಕಿದೆ.



