November 7, 2026
Saturday, November 7, 2026
spot_img

ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಯಾಸೀನ್ ಕೊ*ಲೆ ಆರೋಪಿ ಸಮೀರ್ ಕಾಲಿಗೆ ಗುಂಡೇಟು; ಬಂಧನ

ಹೊಸದಿಗಂತ ವರದಿ ವಿಜಯಪುರ:

ಗುಂಡಿನ ದಾಳಿ ನಡೆಸಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಮಾಡಿದ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಹಿನ್ನೆಲೆ ಕಾಲಿಗೆ ಪೊಲೀಸರು ಗುಂಡಿಕ್ಕಿ, ಆರೋಪಿಯನ್ನು ಬಂಧಿಸಿರುವ ಘಟನೆ ಬೆಳ್ಳಂ ಬೆಳಗ್ಗೆ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರದ ತಾಲೂಕಿನ ಅತಾಲಟ್ಟಿ ಗ್ರಾಮದ ಬಳಿ ಆರೋಪಿ ಸಮೀರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಮುಂಡೇವಾಡಿ ಆಸ್ಪತ್ರೆ ಬಳಿ ಯಾಸೀನ್ ಜುಬೇರ್ ಮೇಲೆ ಮೊನ್ನೆ ಗುಂಡಿನ ದಾಳಿ ನಡೆದು ಆತ ಹತ್ಯೆಯಾಗಿದ್ದ, ಈ ಪ್ರಕರಣದ ಮುಖ್ಯ ಆರೋಪಿಯಾದ ಸಮೀರ್ ನನ್ನು ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮೇಲೆ ಕಂಟ್ರಿ ಪಿಸ್ತೂಲ್ ನಿಂದ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಸಮೀರ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಡಿಜೆ ಹಚ್ಚುವ ವಿಚಾರದಲ್ಲಿ ಯಾಸೀನ್ ಹಾಗೂ ಸಮೀರ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಮೀರ್ ಸೇರಿ ಆತನ ಆಪ್ತರ ಮೇಲೆ ಯಾಸೀನ್ ಹಲ್ಲೆ ನಡೆಸಿದ್ದ. ಬಳಿಕ ಯಾಸೀನ್ ವಿರುದ್ಧ ಸೇಡಿಗೆ ಸಮೀರ್ ಕಾದಿದ್ದ, ಮೊನ್ನೆ ಮುಂಡೆವಾಡಿ ಆಸ್ಪತ್ರೆ ಬಳಿ ಯಾಸೀನ್, ಪತ್ನಿಯನ್ನು ಆಸ್ಪತ್ರೆಗೆ ಕರೆ ತಂದಿದ್ದ, ಈ ವೇಳೆ ಪತ್ನಿಯ ಕಣ್ಮುಂದೆ ಗುಂಡಿನ ದಾಳಿ ನಡೆದು, ಸ್ಥಳದಲ್ಲಿಯೇ ಯಾಸೀನ್ ಅಸುನೀಗಿದ್ದ. ಈ ಗುಂಡಿನ ದಾಳಿ ಬಳಿಕ ಆರೋಪಿ ಸಮೀರ್ ಪರಾರಿಯಾಗಿದ್ದ.

ಸಮೀರ್ ಹಾಗೂ ಸಹಚರರ ಪತ್ತೆಗೆ ಪೊಲೀಸರು 4 ತಂಡ ರಚಿಸಿದ್ದರು, ಮುಖ್ಯ ಆರೋಪಿ ಸಮೀರ್ ಅತಾಲಟ್ಟಿ ಗ್ರಾಮದ ಬಳಿ ಇರುವ ಮಾಹಿತಿ ಪಡೆದ ಪೊಲೀಸರು. ಬಂಧನಕ್ಕೆ ಹೋದಾಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ವೇಳೆ ಈ ಘಟನೆ ನಡೆದಿದೆ.

Must Read