November 7, 2026
Saturday, November 7, 2026
spot_img

ಬ್ಯಾಟಿಂಗ್ ಓಕೆ, ಬೌಲಿಂಗ್ ನಾಟ್ ಓಕೆ! ಹಳೆಯ ತಪ್ಪನ್ನೇ ಮತ್ತೆ ಮಾಡಿತಾ ಚೆನ್ನೈ ಸೂಪರ್ ಕಿಂಗ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟ್ರೇಡಿಂಗ್ ವಿಂಡೋದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೆಗೆದುಕೊಂಡಿರುವ ಒಂದು ನಿರ್ಧಾರ ಈಗ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ತಂಡವು ತನ್ನ ಇಬ್ಬರು ಪ್ರಮುಖ ವೇಗದ ಬೌಲರ್‌ಗಳಾದ ಖಲೀಲ್ ಅಹ್ಮದ್ ಮತ್ತು ನಾಥನ್ ಎಲ್ಲಿಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೀಡಿ, ಪ್ರತಿಯಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕ್ ಎಡ್ವರ್ಡ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೇಲ್ನೋಟಕ್ಕೆ ಇದು ಬ್ಯಾಟಿಂಗ್ ಬಲಪಡಿಸುವ ತಂತ್ರದಂತೆ ಕಂಡರೂ, ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ದೊಡ್ಡ ಹಿನ್ನಡೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

“ಟಿ20ಯಲ್ಲಿ ಪಂದ್ಯ ಗೆಲ್ಲುವುದು ಬ್ಯಾಟಿಂಗ್‌ನಿಂದಾದರೆ, ಟೂರ್ನಿ ಗೆಲ್ಲುವುದು ಬೌಲಿಂಗ್‌ನಿಂದ” ಎಂಬ ಮಾತಿದೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆಗೆ ಡೆತ್ ಓವರ್ ಬೌಲಿಂಗ್ ವಿಭಾಗವೇ ದೊಡ್ಡ ತಲೆನೋವಾಗಿತ್ತು. ಹೀಗಿರುವಾಗ, ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಖಲೀಲ್ ಅಹ್ಮದ್ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ನಾಥನ್ ಎಲ್ಲಿಸ್ ಇಬ್ಬರನ್ನೂ ಒಟ್ಟಿಗೆ ಬಿಟ್ಟುಕೊಟ್ಟಿರುವುದು ತಂಡದ ಬೌಲಿಂಗ್ ಶಕ್ತಿಯನ್ನೇ ಕಡೆಗಣಿಸಿದೆ. ಹೈದರಾಬಾದ್ ತಂಡದ ಪ್ಲೇಯಿಂಗ್ XI ನಲ್ಲೇ ಸರಿಯಾಗಿ ಅವಕಾಶ ಸಿಗದ ಆಟಗಾರರಿಗಾಗಿ ನಿಯಮಿತವಾಗಿ ಆಡುತ್ತಿದ್ದ ಬೌಲರ್‌ಗಳನ್ನು ಕಳೆದುಕೊಂಡಿರುವುದು ಮಾಜಿ ಆಟಗಾರ ಸುಬ್ರಮಣ್ಯಂ ಬದರಿನಾಥ್ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಐಪಿಎಲ್ ನಿಯಮದಂತೆ ಪ್ಲೇಯಿಂಗ್ XI ನಲ್ಲಿ ಕೇವಲ 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ವಿಶ್ಲೇಷಿಸಿದಂತೆ, ತಂಡದಲ್ಲಿ ಈಗಾಗಲೇ ಡೆವಾಲ್ಡ್ ಬ್ರೆವಿಸ್, ನೂರ್ ಅಹ್ಮದ್ ಮತ್ತು ಜೇಮಿ ಓವರ್ಟನ್ ಮೊದಲ ಆದ್ಯತೆಯಾಗಿದ್ದಾರೆ. ಹೀಗಿರುವಾಗ ಲಿವಿಂಗ್‌ಸ್ಟೋನ್ ಅವರನ್ನು ದುಬಾರಿ ಬೆಲೆಗೆ ತಂದರೂ ಅವರಿಗೆ ನಿಯಮಿತ ಅವಕಾಶ ಸಿಗುವುದು ಅನುಮಾನ. 2022ರಲ್ಲಿ ಜೋಶ್ ಹೇಝಲ್​ವುಡ್ ಅವರನ್ನು ಕೈಬಿಟ್ಟು ಆರ್‌ಸಿಬಿಗೆ ಕೊಟ್ಟು ಸಿಎಸ್‌ಕೆ ಪಶ್ಚಾತ್ತಾಪ ಪಟ್ಟಿತ್ತು, ಈಗ ನಾಥನ್ ಎಲ್ಲಿಸ್ ವಿಷಯದಲ್ಲೂ ಅದೇ ತಪ್ಪು ಮರುಕಳಿಸಿದೆ ಎಂಬುದು ಅಭಿಮಾನಿಗಳ ಬೇಸರ.

ಬ್ಯಾಟಿಂಗ್ ಸಾಲನ್ನು ಶಕ್ತಿಶಾಲಿ ಮಾಡಿಕೊಳ್ಳಲು ಲಿವಿಂಗ್‌ಸ್ಟೋನ್ ಅವರನ್ನು ಬರಮಾಡಿಕೊಂಡಿರುವುದು ನಿಜವಾದರೂ, ಬೌಲಿಂಗ್‌ಗೆ ಬಿದ್ದಿರುವ ಈ ದೊಡ್ಡ ಹೊಡೆತವನ್ನು ಸಿಎಸ್‌ಕೆ ಹೇಗೆ ಸರಿದೂಗಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಟ್ರೇಡಿಂಗ್ ನಿರ್ಧಾರ ಸಿಎಸ್‌ಕೆ ಪಾಲಿಗೆ ‘ಮಾಸ್ಟರ್ ಸ್ಟ್ರೋಕ್’ ಆಗಲಿದೆಯೋ ಅಥವಾ ಇತಿಹಾಸದ ‘ದೊಡ್ಡ ಬ್ಲಂಡರ್’ ಆಗಲಿದೆಯೋ ಎಂಬುದಕ್ಕೆ ಮುಂಬರುವ ಐಪಿಎಲ್ ಸೀಸನ್ ಉತ್ತರ ನೀಡಬೇಕಿದೆ.

Must Read

Skip to toolbar