November 7, 2026
Saturday, November 7, 2026
spot_img

ದೇವಿರಮ್ಮನ ದರುಶನಕ್ಕೆ ಆಗಮಿಸಿದ ಭಕ್ತಸಾಗರ: 3,800 ಅಡಿ ಎತ್ತರದ ಬೆಟ್ಟ ಏರಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಫಿನಾಡು ಚಿಕ್ಕಮಗಳೂರಿನ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರುಶನ ಪಡೆಯುತ್ತಿದ್ದಾರೆ.

ಇಂದು ಮುಂಜಾನೆಯಿಂದಲೇ ಸಾಲು ಸಾಲು ಭಕ್ತರು 3,800 ಅಡಿ ಎತ್ತರದ ಬೆಟ್ಟವನ್ನು ಏರಲು ಆರಂಭಿಸಿದ್ದಾರೆ. ತಮ್ಮ ಇಷ್ಟಾರ್ಥವನ್ನು ದೇವಿ ಈಡೇರಿಸುತ್ತಾಳೆ ಎನ್ನುವ ನಂಬಿಕೆಯಲ್ಲಿ ಕಲ್ಲು ಮುಳ್ಳಿನ ಕಠಿಣ ಹಾದಿಯನ್ನು ಸವೆಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಈ ದೇವಿರಮ್ಮನ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಸದ್ಯ ಬೆಟ್ಟದ ತುಂಬೆಲ್ಲಾ ಭಕ್ತರ ದಂಡೇ ಕಾಣಿಸುತ್ತಿದೆ. ಪುರಾಣ ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ಮೈಸೂರು ಅರಸರ ಮನೆಯಿಂದ ಇಂದಿಗೂ ದೇವಿಗೆ ಒಪ್ಪಿಸಲಾಗುವ ಮಡಲಕ್ಕಿ ಸೇವೆ ಈ ಐತಿಹಾಸಿಕ ಜಾತ್ರೆಯ ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಬಾರಿ ಭಕ್ತರ ಅನುಕೂಲಕ್ಕಾಗಿ ಸತತ ಎರಡು ದಿನಗಳ ಕಾಲ ಬೆಟ್ಟ ಏರಲು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಸದ್ಯ ಹಗಲಿನಲ್ಲಿ ಮಾತ್ರ ಭಕ್ತರು ಬೆಟ್ಟ ಏರುತ್ತಿದ್ದಾರೆ. ಇಂದು ಸುಮಾರು 50 ಸಾವಿರ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದೆ. ರಾತ್ರಿಯ ವೇಳೆ ಬೆಟ್ಟ ಹತ್ತಲು ಅವಕಾಶ ಇಲ್ಲ.

ವಾಹನ ದಟ್ಟಣೆ ತಪ್ಪಿಸಲು ಪಾರ್ಕಿಂಗ್‌ಗಾಗಿ ಸುಸಜ್ಜಿತ ವ್ಯವಸ್ಥೆಯನ್ನು ಆಡಳಿತ ಮಂಡಳಿ ಕಲ್ಪಿಸಿದೆ. ಇನ್ನು, ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಭಕ್ತರು ಸೇರಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ ವಹಿಸಲಾಗಿದ್ದು, ಬೆಟ್ಟದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Must Read