November 7, 2026
Saturday, November 7, 2026
spot_img

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದ ಕಿತ್ತಾಟ: ರಾಜ್ಯದ ಆರೋಪ ತಳ್ಳಿಹಾಕಿದ ತೈಲ ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥನಾಲ್ ಬೆರೆಸಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪಕ್ಕೆ ಸಾರ್ವಜನಿಕ ವಲಯದ ಮೂರು ಪ್ರಮುಖ ತೈಲ ಕಂಪನಿಗಳು ತಿರುಗೇಟು ನೀಡಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳು ರಾಜ್ಯ ಸರ್ಕಾರದ ಪರೀಕ್ಷಾ ವರದಿಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿವೆ. ತಮ್ಮ ಸಂಸ್ಥೆಗಳು ಪೂರೈಸುತ್ತಿರುವ E20 ಪೆಟ್ರೋಲ್ ನಿಗದಿತ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಸ್ಪಷ್ಟಪಡಿಸಿವೆ.

30% ಮೀರಿದ ಎಥನಾಲ್ ಮಿಶ್ರಣದ ಆರೋಪ

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ IOCL ಪೆಟ್ರೋಲ್‌ನಲ್ಲಿ ಶೇ.31.2 ಹಾಗೂ HPCL ಪೆಟ್ರೋಲ್‌ನಲ್ಲಿ ಶೇ.30.5ರಷ್ಟು ಎಥನಾಲ್ ಪತ್ತೆಯಾಗಿದೆ ಎಂದು ಹೇಳಿದ್ದರು. ನಿಗದಿತ ಶೇ.20ರ ಮಿತಿಗಿಂತ ಇದು ಹೆಚ್ಚಾಗಿದೆ ಎಂಬುದು ಸರ್ಕಾರದ ಆರೋಪವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿ, ವಾಹನ ಸವಾರರಿಗೆ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದ್ದರು.

ಇದನ್ನೂ ಓದಿ:

ಪರೀಕ್ಷಾ ವಿಧಾನವೇ ಸರಿಯಿಲ್ಲ ಎಂದ OMCಗಳು

ತೈಲ ಕಂಪನಿಗಳ ಪ್ರಕಾರ, ರಾಜ್ಯ ಸರ್ಕಾರದ ವರದಿಗಳು ಕಾನೂನುಬದ್ಧ ಮತ್ತು ತಾಂತ್ರಿಕ ಪರೀಕ್ಷಾ ವಿಧಾನಗಳನ್ನು ಅನುಸರಿಸಿಲ್ಲ. 2005ರ ನಿಯಂತ್ರಣ ಆದೇಶ ಹಾಗೂ 2024ರ ಮಾರ್ಕೆಟಿಂಗ್ ಡಿಸಿಪ್ಲಿನ್ ಮಾರ್ಗಸೂಚಿಗಳ ಪ್ರಕಾರ ಮಾದರಿ ಸಂಗ್ರಹ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ನಿರ್ದಿಷ್ಟ ಕ್ರಮಗಳಿವೆ ಎಂದು ತಿಳಿಸಿವೆ. ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಮಾದರಿಗಳ ವೇಳೆ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿರಲಿಲ್ಲ ಎಂಬುದನ್ನೂ ಆಕ್ಷೇಪಿಸಿವೆ.

ಕರ್ನಾಟಕದ 56 ಮಾದರಿಗಳೂ ಮಾನದಂಡದಲ್ಲಿವೆ: ಕೇಂದ್ರ

ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹೇಳಿಕೆಯ ಪ್ರಕಾರ, ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪರೀಕ್ಷಿಸಿದ 893 ಮಾದರಿಗಳಲ್ಲೂ ಎಥನಾಲ್ ಪ್ರಮಾಣ ಶೇ.19ರಿಂದ 21ರ ನಡುವೆ ಇತ್ತು. ಕರ್ನಾಟಕದಲ್ಲಿ ಪರೀಕ್ಷಿಸಿದ 56 ಮಾದರಿಗಳಲ್ಲೂ ಪ್ರಮಾಣ ಶೇ.19ರಿಂದ 20ರಷ್ಟಿದ್ದು, ಸರಾಸರಿ ಶೇ.19.30 ದಾಖಲಾಗಿದೆ ಎಂದಿದೆ.

Must Read

Skip to toolbar