ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸೋದರ ಅಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲಿನ ದಾಳಿ ಮತ್ತು ಕಾಳಿ ಪೂಜೆ ಆಚರಣೆಗೆ ಅಡ್ಡಿಪಡಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, “ನಿಮ್ಮ ಬಳಿ ಎಷ್ಟು ಬುಲ್ಡೋಜರ್ಗಳಿವೆ? ಬನ್ನಿ, ನಾನು ನಿಮ್ಮ ಮುಂದೆಯೇ ನಿಂತಿದ್ದೇನೆ. ನನ್ನ ಮೇಲೆಯೇ ಹರಿಸಿ. ನಿಮ್ಮ ಧೈರ್ಯ ಎಷ್ಟಿದೆ ಎಂದು ನಾನು ನೋಡುತ್ತೇನೆ,” ಎಂದು ಕಮಲ ಪಡೆಗೆ ನೇರ ಸವಾಲು ಹಾಕಿದ್ದಾರೆ.
ಕೋಲ್ಕತಾದ ಕಾಳೀಘಾಟ್ನಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಇಂತಹ ದೌರ್ಜನ್ಯಗಳನ್ನು ಸಹಿಸುವ ಬದಲು ಬಿಜೆಪಿಯ ಬುಲ್ಡೋಜರ್ ರಾಜಕಾರಣವನ್ನು ಎದುರಿಸಲು ತಾವು ಸಿದ್ಧರಾಗಿರುವುದಾಗಿ ಗುಡುಗಿದ್ದಾರೆ.
ನಡೆದಿದ್ದೇನು?
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕಾಳೀಘಾಟ್ ರಸ್ತೆಯಲ್ಲಿರುವ ನಿವಾಸದ ಮೇಲೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ಬಿಜೆಪಿ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಟಿಎಂಸಿ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯ ನಂತರ ಈ ದಾಳಿ ನಡೆದಿದ್ದು, ಇದು ತಮ್ಮ ಜೀವಕ್ಕೆ ಸಂಚಕಾರ ತರುವಂತಹ ದಾಳಿಯಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್, “ಕಳೆದ ಎರಡು ದಿನಗಳಿಂದ ನಿರಂತರವಾಗಿ ಹೊಂಚು ಹಾಕಿದ್ದ ಬಿಜೆಪಿ ಗೂಂಡಾಗಳು ಇಂದು ಮುಂಜಾನೆ 2 ಗಂಟೆಗೆ ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಜನಪ್ರತಿನಿಧಿಯಾದ ಒಬ್ಬ ಸಂಸದನಿಗೇ ಈ ಪರಿಸ್ಥಿತಿ ಬಂದೊದಗಿರುವಾಗ, ಪಶ್ಚಿಮ ಬಂಗಾಳದ ಸಾಮಾನ್ಯ ಜನರ ಗತಿ ಏನು? ಕಳೆದ ಆರು ತಿಂಗಳಲ್ಲಿ ನನ್ನ ಜೀವದ ಮೇಲೆ ನಡೆದ 7ನೇ ದಾಳಿ ಇದಾಗಿದೆ. ಆದರೂ ಪೊಲೀಸರಾಗಲಿ, ನ್ಯಾಯಾಂಗವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಳಿ ಪೂಜೆಗೂ ಅಡ್ಡಿ – ಮಮತಾ ಆರೋಪ
ದಾಳಿಯ ಜೊತೆಗೆ, ಸ್ಥಳೀಯವಾಗಿ ಸಾಂಪ್ರದಾಯಿಕವಾಗಿ ನಡೆಯುವ ಕಾಳಿ ಪೂಜೆ ಮತ್ತು ದೀಪಾವಳಿ ಆಚರಣೆಗಳಿಗೆ ಬಿಜೆಪಿ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಕೆಲವು ಪೂಜೆಗಳ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಆದರೆ, ಮುಖ್ಯ ರಸ್ತೆಯಲ್ಲೇ ಹೊಸದಾಗಿ ಆಯೋಜಿಸಲಾದ ಪೂಜೆಯೊಂದಕ್ಕೆ ಅನುಮತಿ ನೀಡುವ ಮೂಲಕ ಸ್ಥಳೀಯ ಕ್ಲಬ್ಗಳ ಚಟುವಟಿಕೆಗಳನ್ನು ತಡೆಯಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಮುಖ್ಯ ರಸ್ತೆಯಲ್ಲಿ ಹೊಸ ಪೂಜೆಗೆ ಅವಕಾಶ ನೀಡಿರುವುದರಿಂದ ತಮ್ಮ ಸ್ವಂತ ಆಚರಣೆಗಳ ಹಾದಿ ಬಂದ್ ಆಗಿದೆ ಎಂದು ಆರೋಪಿಸಿರುವ ಮಮತಾ, ಬಿಜೆಪಿ ಗೂಂಡಾಗಿರಿಯ ಮೂಲಕ ಇಡೀ ಪ್ರದೇಶದಲ್ಲಿ ಶಾಂತಿ ಭಂಗ ಉಂಟುಮಾಡಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತಾರಕಕ್ಕೇರಿಸಿದೆ.



