ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಪನಿಯ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ಪ್ರೀತಿ, ಗೌರವ ಮತ್ತು ಪ್ರೋತ್ಸಾಹವೂ ಮುಖ್ಯ ಎಂಬುದನ್ನು ಕೇರಳ ಮೂಲದ ಉದ್ಯಮಿಯೊಬ್ಬರು ತಮ್ಮ ವಿಭಿನ್ನ ಉಡುಗೊರೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಯುಎಇಯಲ್ಲಿ ಕಂಪನಿ ನಡೆಸುತ್ತಿರುವ ವ್ಯವಸ್ಥಾಪಕ ನಿರ್ದೇಶಕಿ ಹಸೀನಾ ನಿಶಾದ್, ತಮ್ಮ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಹೊಸ ಐಫೋನ್ಗಳನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ವಿಶೇಷ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಕುರ್ಚಿಯ ಕೆಳಗೆ ಕಾದಿತ್ತು ದುಬಾರಿ ಗಿಫ್ಟ್!
ಹಸೀನಾ ನಿಶಾದ್ ತಮ್ಮ ಮಹಿಳಾ ಉದ್ಯೋಗಿಗಳಿಗೆ ಸರ್ಪ್ರೈಸ್ ನೀಡಲು ವಿಶೇಷ ವ್ಯವಸ್ಥೆ ಮಾಡಿದ್ದರು. ಎಲ್ಲ ಸಿಬ್ಬಂದಿಯನ್ನೂ ಕಾನ್ಫರೆನ್ಸ್ ರೂಮ್ಗೆ ಕರೆಸಿ ಕುಳಿತುಕೊಳ್ಳುವಂತೆ ಸೂಚಿಸಿದರು. ಮಹಿಳೆಯರು ಕುರ್ಚಿಗಳನ್ನು ಹಿಂದಕ್ಕೆ ಎಳೆದು ಕುಳಿತುಕೊಳ್ಳಲು ಮುಂದಾದಾಗ, ಮೇಜಿನ ಕೆಳಗೆ ಆಸನಗಳ ಮೇಲೆ ಸುಂದರವಾಗಿ ಪ್ಯಾಕ್ ಮಾಡಿದ್ದ ಉಡುಗೊರೆ ಬಾಕ್ಸ್ಗಳು ಕಾಣಿಸಿಕೊಂಡವು. ಅವುಗಳನ್ನು ತೆರೆದು ನೋಡಿದಾಗ ಹೊಸ ಐಫೋನ್ಗಳು ಕಂಡು ಸಿಬ್ಬಂದಿ ಸಂತೋಷದಿಂದ ಅಚ್ಚರಿಗೊಂಡರು.
ಇದನ್ನೂ ಓದಿ:
ಹೌಸ್ಕೀಪಿಂಗ್ ಸಿಬ್ಬಂದಿಗೂ ಮರೆಯದ ಉಡುಗೊರೆ
ಈ ವಿಡಿಯೋದಲ್ಲಿ ಮತ್ತೊಂದು ಭಾವನಾತ್ಮಕ ಕ್ಷಣ ಎಲ್ಲರ ಗಮನ ಸೆಳೆದಿದೆ. ಶರ್ಬತ್ ನೀಡಲು ಬಂದ ಹೌಸ್ಕೀಪಿಂಗ್ ಮಹಿಳಾ ಸಿಬ್ಬಂದಿಗೂ ಹಸೀನಾ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಅನಿರೀಕ್ಷಿತ ಉಡುಗೊರೆಯಿಂದ ಭಾವುಕರಾದ ಆಕೆ, ಹಸೀನಾರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಮಹಿಳೆಯರ ಬೆಳವಣಿಗೆಯೇ ನನ್ನ ಸಂತೋಷ
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಸೀನಾ, ಪ್ರತಿಯೊಬ್ಬ ಮಹಿಳೆಯೂ ತನ್ನದೇ ಆದ ಕನಸು, ಜವಾಬ್ದಾರಿ ಮತ್ತು ಸವಾಲುಗಳನ್ನು ಹೊಂದಿರುತ್ತಾಳೆ. ಅವರು ಆತ್ಮವಿಶ್ವಾಸದಿಂದ ಬೆಳೆದು ತಮ್ಮ ಗುರಿ ತಲುಪುವುದನ್ನು ನೋಡುವುದೇ ತನಗೆ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಒಬ್ಬ ಮಹಿಳೆಯ ಯಶಸ್ಸು ಮತ್ತೊಬ್ಬಳಿಗೂ ಮುಂದೆ ಸಾಗುವ ಧೈರ್ಯ ನೀಡುತ್ತದೆ ಎಂಬ ಸಂದೇಶವನ್ನೂ ಹಂಚಿಕೊಂಡಿದ್ದಾರೆ.
https://www.instagram.com/reel/DfXCbpZINhH/?utm_source=ig_embed&ig_rid=A8237pHognSuqLALCJjq01o



