November 7, 2026
Saturday, November 7, 2026
spot_img

ಯುಕೆಯಲ್ಲಿ ಉದ್ಯೋಗದ ಆಸೆ ತೋರಿಸಿ 28.15 ಲಕ್ಷ ರೂ. ಪಂಗನಾಮ: ಬೆಳಗಾವಿಯ ವೈದ್ಯರಿಗೆ ವಂಚನೆ

ಹೊಸದಿಗಂತ ವರದಿ ಬೆಳಗಾವಿ:

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೈದ್ಯರೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು, ವೀಸಾ ಕೊಡಿಸದೆ ಹಣವನ್ನೂ ಹಿಂತಿರುಗಿಸದೆ ವಂಚಿಸಿರುವ ಆರೋಪ ಬೆಳಗಾವಿಯಲ್ಲಿ ಕೇಳಿಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಉದ್ಯೋಗದ ಆಮಿಷವೊಡ್ಡಿ ಒಟ್ಟು 28.15 ಲಕ್ಷ ವಂಚಿಸಿರುವ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಸದಾಶಿವನಗರ ನಿವಾಸಿ ವೈದ್ಯ ನಿಲೇಶಕುಮಾರ ಅವರು ವಂಚನೆಗೊಳಗಾದವರು. ಗುಜರಾತ್ ಮೂಲದ ಮೋಹಿನಿ ಪರ್ಸೋತ್ತಂಭಾಯಿ ಜಿಂಜಾಲಾ ಎಂಬ ಮಹಿಳೆ ವಿರುದ್ಧ ವಂಚನೆಯ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:

ವೈದ್ಯರ ಪತ್ನಿಯ ಸಹೋದರಿಗೆ ಯುನೈಟೆಡ್ ಕಿಂಗ್‌ಡಂನಲ್ಲಿ ವೀಸಾ ಮಾಡಿಸಿಕೊಟ್ಟು ಉದ್ಯೋಗ ಒದಗಿಸುವುದಾಗಿ ಮಹಿಳೆ ಭರವಸೆ ನೀಡಿದ್ದಳು ಎನ್ನಲಾಗಿದೆ. ಈ ನಂಬಿಕೆಯ ಮೇರೆಗೆ ವೈದ್ಯರಿಂದ ವಿವಿಧ ಹಂತಗಳಲ್ಲಿ ಒಟ್ಟು 28.15 ಲಕ್ಷ ಹಣ ಪಡೆದಿದ್ದಳು. ಆದರೆ, ಭರವಸೆ ನೀಡಿದಂತೆ ವೀಸಾ ವ್ಯವಸ್ಥೆ ಮಾಡಿಸದೆ, ಪಡೆದ ಹಣವನ್ನೂ ಮರಳಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ವಾಪಸ್ ನೀಡುವಂತೆ ಅಥವಾ ವೀಸಾ ವ್ಯವಸ್ಥೆ ಪೂರ್ಣಗೊಳಿಸುವಂತೆ ವೈದ್ಯರು ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಮಾಡಿದ್ದರೂ ಮಹಿಳೆಯಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎನ್ನಲಾಗಿದೆ. ಇದರಿಂದ ತಮಗೆ ವಂಚನೆಯಾಗಿರುವುದನ್ನು ಅರಿತ ವೈದ್ಯರು ಪೊಲೀಸರ ಮೊರೆ ಹೋಗಿದ್ದಾರೆ.

ದೂರಿನ ಆಧಾರದ ಮೇಲೆ ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

Skip to toolbar