ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಂಡಿಗ ದೇವಿರಮ್ಮನ ಬೆಟ್ಟದಲ್ಲಿ ದುರಂತವೊಂದು ಸಂಭವಿಸಿದೆ.
ದೇವಿಯ ದರುಶನಕ್ಕಾಗಿ ಬೆಟ್ಟ ಹತ್ತುತ್ತಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ ಲಕ್ಷ್ಮಣ್ (32) ಎಂದು ಗುರುತಿಸಲಾಗಿದೆ.
ಬೆಟ್ಟ ಏರುತ್ತಿದ್ದಾಗ ಕುಸಿದು ಬಿದ್ದ ಭಕ್ತ
ದೇವಿರಮ್ಮನ ದರುಶನ ಪಡೆಯುವ ಉದ್ದೇಶದಿಂದ ಬೆಟ್ಟ ಹತ್ತುತ್ತಿದ್ದ ಲಕ್ಷ್ಮಣ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಪರಿಣಾಮ ಅವರು ಬೆಟ್ಟದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದೇವಿರಮ್ಮನ ಜಾತ್ರೆಗೆ ಭಕ್ತಸಾಗರ
ಇತ್ತ ದೇವಿರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದೇವಿರಮ್ಮನ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪುರಾಣ ಪ್ರಸಿದ್ಧ ಈ ಕ್ಷೇತ್ರದಲ್ಲಿ ಮೈಸೂರು ಅರಸರ ಮನೆಯಿಂದ ಇಂದಿಗೂ ದೇವಿಗೆ ಮಡಿಲಕ್ಕಿ ಸೇವೆ ಸಲ್ಲಿಸುವ ಸಂಪ್ರದಾಯ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿದೆ.
ಎರಡು ದಿನ ಬೆಟ್ಟ ಏರಲು ಅವಕಾಶ
ಈ ಬಾರಿ ಭಕ್ತರ ಅನುಕೂಲಕ್ಕಾಗಿ ಸತತ ಎರಡು ದಿನಗಳ ಕಾಲ ಬೆಟ್ಟ ಹತ್ತಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಹಗಲಿನ ವೇಳೆಯಲ್ಲಿ ಮಾತ್ರ ಭಕ್ತರಿಗೆ ಬೆಟ್ಟ ಏರಲು ಅನುಮತಿ ನೀಡಲಾಗಿದೆ.



