ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಗಡಿಗಳನ್ನಷ್ಟೇ ಅಲ್ಲ, ಆಂತರಿಕ ಭದ್ರತೆಯನ್ನೂ ಕಾಪಾಡುವ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸಿದ ಅವರು, ನಕ್ಸಲಿಸಂ ವಿರುದ್ಧದ ದಶಕಗಳ ಹೋರಾಟದಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಸ್ಮರಿಸಿದರು.
ನಕ್ಸಲ್ ಭೀತಿಯಿಲ್ಲದ ಮೊದಲ ದೀಪಾವಳಿ
2026ರ ದೀಪಾವಳಿ ದೇಶಕ್ಕೆ ವಿಶೇಷವಾದದ್ದು ಎಂದು ಬಣ್ಣಿಸಿದ ಮೋದಿ, ನಕ್ಸಲಿಸಂನಿಂದ ಮುಕ್ತವಾದ ಭಾರತದ ಸಂಭ್ರಮವನ್ನು ಹಂಚಿಕೊಂಡರು. ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲ್ ಭೀತಿಯಿಂದ ಹೊರಬಂದಿರುವುದು ಮತ್ತು ಕೋಟ್ಯಂತರ ಜನರು ಆತಂಕವಿಲ್ಲದೆ ಬದುಕುವ ವಾತಾವರಣ ನಿರ್ಮಾಣವಾಗಿರುವುದು ಮಹತ್ವದ ಬೆಳವಣಿಗೆ ಎಂದು ಹೇಳಿದರು.
ಯೋಧರೇ ನನ್ನ ಕುಟುಂಬದ ಸದಸ್ಯರು
ದೇಶದ ಜನರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸುತ್ತಿರುವಾಗ, ಭದ್ರತಾ ಪಡೆಗಳು ದೇಶದ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಗಡಿಗಳಲ್ಲಿ ಅಥವಾ ದೇಶದ ಒಳಭಾಗದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಯೋಧರೂ ತಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದು ಮೋದಿ ಹೇಳಿದರು. ಬಸ್ತಾರ್‌ನ ಕಾಡುಗಳಲ್ಲಿ ಹಿಂದೆ ನಕ್ಸಲ್ ಪ್ರಭಾವವಿದ್ದರೂ, ಯೋಧರ ತ್ಯಾಗ ಮತ್ತು ಸಮರ್ಪಣೆಯಿಂದ ಅಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಆರ್‌ಪಿಎಫ್ ಸಾಧನೆಗೆ ಶ್ಲಾಘನೆ
ಸಿಆರ್‌ಪಿಎಫ್ ಕಳೆದ 12 ತಿಂಗಳಿಂದ ಕಾರ್ಯಾಚರಣೆಯಲ್ಲಿ ಯಾವುದೇ ಸಾವು ಸಂಭವಿಸದ ಸಾಧನೆ ಮಾಡಿರುವುದನ್ನು ಮೋದಿ ವಿಶೇಷವಾಗಿ ಉಲ್ಲೇಖಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೇ ತಿಂಗಳಲ್ಲಿ ಬಸ್ತಾರ್ ನಕ್ಸಲ್ ಮುಕ್ತವಾಗಿದೆ ಎಂದು ಘೋಷಿಸಿದ್ದರು.
ಸಿಕ್ಕಿಂನಲ್ಲಿ ರಾಜನಾಥ್ ಸಿಂಗ್ ಸಂಭ್ರಮ
ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಕ್ಕಿಂನ ನಾಥುಲಾ ಪಾಸ್ ಸಮೀಪದ ಶೆರಥಾಂಗ್ ಯುದ್ಧ ಸ್ಮಾರಕದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದರು. ಯೋಧರ ಶಿಸ್ತು, ಸಮರ್ಪಣೆ ಮತ್ತು ಬಲಿದಾನವನ್ನು ಕೊಂಡಾಡಿದರು.



