ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟ ರಣ್ಬೀರ್ ಕಪೂರ್. ಎಂತಹದ್ದೇ ಪಾತ್ರ ಕೊಟ್ಟರೂ ಅದರಲ್ಲಿ ಜೀವ ತುಂಬುವ ಅಪರೂಪದ ಕಲಾಕಾರ. ಇತ್ತೀಚೆಗೆ ಬಂದ ‘ಅನಿಮಲ್’ ಸಿನಿಮಾದಲ್ಲಿ ರಗಡ್ ಮಾಸ್ ನಟನೆಯಿಂದ ಧೂಳೆಬ್ಬಿಸಿದ್ದ ರಣ್ಬೀರ್, ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ವೈವಿಧ್ಯಮಯ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ರಣ್ಬೀರ್, ಈಗ ತಮ್ಮ ಸಿನಿ ಜೀವನದ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ರಣ್ಬೀರ್ ಕಪೂರ್, “ನಟನಾಗಿ ಇದು ನನ್ನ ಕೊನೆಯ ದಶಕ” ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ 2030ರ ವೇಳೆಗೆ ತಾವು ನಟನೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಬಣ್ಣ ಹಚ್ಚುವುದನ್ನು ನಿಲ್ಲಿಸಿ, ಪೂರ್ಣಪ್ರಮಾಣದಲ್ಲಿ ಸಿನಿಮಾ ನಿರ್ದೇಶನದ ಕಡೆಗೆ ಗಮನ ಹರಿಸುವುದು ಅವರ ಆಸೆಯಾಗಿದೆ.
ಕೆಲವು ತಿಂಗಳುಗಳಿಂದ ರಣ್ಬೀರ್ ಸ್ವತಃ ತಾವೇ ಒಂದು ಸಿನಿಮಾಗಾಗಿ ಕಥೆ-ಚಿತ್ರಕಥೆ ಬರೆಯಲು ಶುರುಮಾಡಿದ್ದಾರಂತೆ. “ಕಥೆ ಸೃಷ್ಟಿಸುವುದು ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅದು ಅತ್ಯಂತ ಸವಾಲಿನ ಕೆಲಸ. ಬರವಣಿಗೆ ಶುರು ಮಾಡಿದ ಮೇಲೆಯೇ ನನಗೆ ಬರಹಗಾರರು ಮತ್ತು ನಿರ್ದೇಶಕರ ಮೇಲೆ ಅಪಾರ ಗೌರವ ಬಂದಿದೆ” ಎಂದು ರಣ್ಬೀರ್ ಹೇಳಿದ್ದಾರೆ. ಸಂಗೀತಗಾರನ ನಂತರ ಸೃಜನಶೀಲತೆಯ ಉತ್ತುಂಗವನ್ನು ಅನುಭವಿಸುವ ಏಕೈಕ ವ್ಯಕ್ತಿ ಎಂದರೆ ಅದು ನಿರ್ದೇಶಕ ಮಾತ್ರ ಎಂಬುದು ಅವರ ಬಲವಾದ ನಂಬಿಕೆ.
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರವು ಕೌಟುಂಬಿಕ ಡ್ರಾಮಾ ಆಗಿರಲಿದೆ ಎಂದು ರಣ್ಬೀರ್ ಸುಳಿವು ನೀಡಿದ್ದಾರೆ. ‘ಲೈಫ್ ಈಸ್ ಬ್ಯೂಟಿಫುಲ್’, ‘ಇಟ್ಸ್ ಎ ವಂಡರ್ಫುಲ್ ಲೈಫ್’ ಹಾಗೂ ರಾಜ್ಕುಮಾರ್ ಹಿರಾನಿ ಅವರ ಸಿನಿಮಾಗಳಂತೆ, ವೀಕ್ಷಕರ ಮನಸ್ಸಿಗೆ ಹಿತ ನೀಡುವ ಹಾಗೂ ಖುಷಿ ಕೊಡುವ ಕಥೆಯನ್ನು ತೆರೆಗೆ ತರಲು ಬಯಸಿದ್ದಾರೆ.
ವರ್ಷದಲ್ಲಿ 100 ರಿಂದ 125 ದಿನಗಳಷ್ಟೇ ಕೆಲಸ ಮಾಡುವುದರಿಂದ ಕಥೆ ಬರೆಯಲು ಸಾಕಷ್ಟು ಸಮಯ ಸಿಗುತ್ತದೆ ಎಂದಿರುವ ರಣ್ಬೀರ್, “ನನ್ನ ನಿರ್ದೇಶನದ ಸಿನಿಮಾದಲ್ಲಿ ನಾನೇ ನಟಿಸುವುದಿಲ್ಲ, ಕೇವಲ ಆಕ್ಷನ್-ಕಟ್ ಹೇಳುತ್ತೇನೆ” ಎಂದಿದ್ದಾರೆ.



