ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಭೀಕರ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರಿಗೆ ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ.
ಬೆಂಗಳೂರು ಉತ್ತರ ವಿಭಾಗದ ಪೊಲೀಸರು ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಸೇಲಂ ಘಾಟ್ ಪ್ರದೇಶದ ದಟ್ಟ ಅರಣ್ಯದಲ್ಲಿ ಶೋಧ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇದರೊಂದಿಗೆ ಹತ್ಯೆಗೀಡಾದ ಏಳು ಮಂದಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾದಂತಾಗಿದೆ.
ಸೇಲಂ ಕಾಡಿನಲ್ಲಿ ಇಬ್ಬರ ಮೃತದೇಹ ಪತ್ತೆ
ಪತ್ತೆಯಾದ ಮೃತದೇಹಗಳನ್ನು ಪ್ರಮುಖ ಆರೋಪಿ ಇಂದುಶೇಖರ್ನ ಪತ್ನಿ ಸುನೀತಾ (40) ಹಾಗೂ ಅತ್ತೆ ರೂಪಾವತಿ (65) ಅವರದ್ದೆಂದು ಗುರುತಿಸಲಾಗಿದೆ. ದೀರ್ಘಕಾಲ ಕಳೆದಿರುವುದರಿಂದ ಮೃತದೇಹಗಳು ಸಂಪೂರ್ಣ ಕೊಳೆತು ಹೋಗಿವೆ.
ಪುಟ್ಟ ಪುನೀತ್ಗೆ ಅಂತಿಮ ವಿದಾಯ
ಈ ಪ್ರಕರಣದಲ್ಲಿ ಮೃತಪಟ್ಟವರ ಪೈಕಿ ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ನಂದಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಕುಟುಂಬಸ್ಥರು ಶನಿವಾರ ರಾತ್ರಿ ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ಬಾಲಕನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಉಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ:
ಚಿನ್ನಾಭರಣ ಮಾರಾಟ ಮಾಡಿ ಕಾರಿಗೆ ಡೀಸೆಲ್?
ಪೊಲೀಸರ ತನಿಖೆಯ ಪ್ರಕಾರ, ಹತ್ಯೆಯ ಬಳಿಕ ಆರೋಪಿ ಮೃತರ ಚಿನ್ನಾಭರಣಗಳನ್ನು ತೆಗೆದುಕೊಂಡು, ಕೆಲವು ಆಭರಣಗಳನ್ನು ಮಾರಾಟ ಮಾಡಿದ್ದಾನೆ ಹಾಗೂ ಇನ್ನು ಕೆಲವು ಅಡವಿಟ್ಟಿದ್ದಾನೆ ಎನ್ನಲಾಗಿದೆ. ಈ ಹಣವನ್ನು ಮೃತದೇಹಗಳನ್ನು ಸಾಗಿಸಲು ಬಳಸಿದ ಕಾರಿಗೆ ಡೀಸೆಲ್ ಖರೀದಿಸಲು ಬಳಸಿದ್ದಾನೆ ಎಂಬ ಆರೋಪವೂ ಇದೆ. ಅಪ್ರಾಪ್ತ ಮಗಳಿಗೆ ಆಭರಣಗಳನ್ನು ನೀಡಿರುವುದು ಹಾಗೂ ಮೃತದೇಹ ವಿಲೇವಾರಿಗೆ ಆಕೆಯ ಸಹಕಾರ ಪಡೆದಿರುವ ಶಂಕೆಯೂ ತನಿಖೆಯಲ್ಲಿದೆ.
ಕನ್ನಡದ ಸಂದೇಶದಿಂದ ಸಿಕ್ಕ ಸುಳಿವು
ಮೃತ ಶಂಕರ್ ಅವರ ಮೊಬೈಲ್ನಿಂದ ಬಂದಿದ್ದ ಕನ್ನಡದ ಪಠ್ಯ ಸಂದೇಶಕ್ಕೆ ದೊರೆತ ಪ್ರತ್ಯುತ್ತರ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು. ಇದೇ ಸುಳಿವು ತನಿಖೆಗೆ ನೆರವಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಏಳು ಜೀವಗಳನ್ನು ಬಲಿ ಪಡೆದ ಈ ಪ್ರಕರಣದಲ್ಲಿ ಇನ್ನೂ ನಾಲ್ವರ ಮೃತದೇಹಗಳ ಪತ್ತೆ ಬಾಕಿಯಿದೆ. ಆರೋಪಿಯ ವಿಚಾರಣೆ, ಸ್ಥಳ ಮಹಜರು ಮತ್ತು ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಪ್ರಕರಣದ ಉಳಿದ ಸಂಗತಿಗಳನ್ನು ಬಯಲಿಗೆಳೆಯಲು ಪೊಲೀಸರು ಮುಂದಾಗಿದ್ದಾರೆ.



