November 8, 2026
Sunday, November 8, 2026
spot_img

‘ಜೈ ಭೀಮ್’ ನಂತರ ಸೂರ್ಯ ಭರ್ಜರಿ ಕಮ್‌ಬ್ಯಾಕ್: ಬಾಕ್ಸ್ ಆಫೀಸ್‌ನಲ್ಲಿ ‘ಸೀನ್’ ಕಮಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರ್ಯ ಪಾಲಿಗೆ ಈ ವರ್ಷ ನಿಜಕ್ಕೂ ಅದೃಷ್ಟದ ಬಾಗಿಲು ತೆರೆದಿದೆ. 2021ರಲ್ಲಿ ತೆರೆಕಂಡ ‘ಜೈ ಭೀಮ್’ ಸಿನಿಮಾದ ನಂತರ ಸೂರ್ಯ ನಾಯಕನಾಗಿ ನಟಿಸಿದ ‘ಎತ್ತರಕ್ಕುಮ್ ತುಂದಿಂದವನ್’ (ಇಟಿ), ‘ಕಂಗುವ’ ಹಾಗೂ ‘ರೆಟ್ರೊ’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡಿದ್ದವು. ಒಂದು ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದ ಸೂರ್ಯಗೆ ಈ ವರ್ಷ ಸಾಲು ಸಾಲು ಹಿಟ್‌ಗಳು ಸಿಗುತ್ತಿದ್ದು, ಅವರ ಚಿತ್ರ ಜೀವನಕ್ಕೆ ಹೊಸ ಮೆರುಗು ತಂದಿದೆ.

ಈಗಾಗಲೇ ಈ ವರ್ಷ ಬಿಡುಗಡೆಯಾದ ಸೂರ್ಯ ಅಭಿನಯದ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾಗಳು ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದವು. ಇದೀಗ ನವೆಂಬರ್ 6 ರಂದು ಬಿಡುಗಡೆಯಾಗಿರುವ ಅವರ ಮೂರನೇ ಸಿನಿಮಾ ‘ಸೀನ್’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ಪೈಪೋಟಿಯ ನಡುವೆಯೂ ಬಿಡುಗಡೆಯಾದ ಈ ಆಕ್ಷನ್-ಕಾಮಿಡಿ ಥ್ರಿಲ್ಲರ್ ಸಿನಿಮಾ, ಮೊದಲ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

‘ಸೀನ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 33 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈ ಗಳಿಕೆಯು ಸೂರ್ಯ ಅವರ ಹಿಂದಿನ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಚಿತ್ರಗಳ ಮೊದಲ ದಿನದ ಗಳಿಕೆಗಿಂತಲೂ ಹೆಚ್ಚಾಗಿದೆ. ಇನ್ನು ಎರಡನೇ ದಿನವಾದ ಶನಿವಾರ ಈ ಗಳಿಕೆ ಮತ್ತಷ್ಟು ಏರಿಕೆಯಾಗಿದ್ದು, ಜಾಗತಿಕವಾಗಿ 38 ಕೋಟಿ ರೂ. ಹಾಗೂ ಭಾರತದಲ್ಲೇ 20 ಕೋಟಿ ರೂ. ಬಾಚಿಕೊಂಡಿದೆ.

ಅಲ್ಲಿಗೆ ಕೇವಲ ಎರಡೇ ದಿನಗಳಲ್ಲಿ ಈ ಸಿನಿಮಾ ಒಟ್ಟು 60 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ರೋಮಾಂಚನಂ’, ‘ಆವೇಷಂ’ ನಿರ್ದೇಶಿಸಿದ್ದ ಹಾಗೂ ‘ಬಾಲನ್’ ಚಿತ್ರಕ್ಕೆ ಕಥೆ ಬರೆದಿದ್ದ ಖ್ಯಾತ ನಿರ್ದೇಶಕ ಜೀತು ಮಾಧವನ್, ಇದೇ ಮೊದಲ ಬಾರಿಗೆ ತಮಿಳಿನಲ್ಲಿ ‘ಸೀನ್’ ನಿರ್ದೇಶಿಸಿ ಗೆಲುವು ಸಾಧಿಸಿದ್ದಾರೆ.

Must Read

Skip to toolbar