November 8, 2026
Sunday, November 8, 2026
spot_img

ಮನಿ ಡಬ್ಲಿಂಗ್ ಹೆಸರಿನಲ್ಲಿ 2.68 ಕೋಟಿ ರೂ. ದರೋಡೆಗೆ ಯತ್ನ: ಶಾಸಕರ ಗನ್‌ಮ್ಯಾನ್ ಸೇರಿ ಏಳು ಮಂದಿ ಅರೆಸ್ಟ್‌

ಹೊಸದಿಗಂತ ವರದಿ ಬೆಳಗಾವಿ:

ಹಣ ದುಪ್ಪಟ್ಟು ಮಾಡಿಕೊಡುವ ಆಮಿಷವೊಡ್ಡಿ 2.68 ಕೋಟಿ ರೂ. ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅ. 30ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಗನ್‌ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ ಅರಭಾವಿ, ರಾಜಾರಾಮ, ರಮೇಶ ಮಾಳ್ಯಾಗೋಳ, ಪ್ರಕಾಶ, ರಾಘವೇಂದ್ರ ಕೊಪ್ಪದ ಹಾಗೂ ರಾಮಪ್ಪ ತಳವಾರ ಬಂಧಿತ ಆರೋಪಿಗಳು.

ಕಲ್ಮೇಶ ಎಂಬುವವರು ಶಿವಂ ಅಸೋಸಿಯೇಟ್ಸ್ನಲ್ಲಿ ಹಣ ಕಳೆದುಕೊಂಡಿದ್ದನ್ನು ತಿಳಿದ ಚಿದಾನಂದ ಕುರಬೆಟ್, ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿದ್ದ. ಒಂದು ಲಕ್ಷ ರೂ.ಗೆ 30 ಸಾವಿರ ರೂ. ಹೆಚ್ಚುವರಿ ನೀಡುವ ಆಮಿಷವೊಡ್ಡಿದ್ದ. ಇದನ್ನು ನಂಬಿದ ಕಲ್ಮೇಶ ಬ್ಯಾಂಕ್, ಸೊಸೈಟಿ ಹಾಗೂ ಸ್ನೇಹಿತರಿಂದ ಒಟ್ಟು 2.68 ಕೋಟಿ ರೂ. ಸಂಗ್ರಹಿಸಿದ್ದರು.

ಹಣ ಸಿದ್ಧವಾಗಿರುವುದಾಗಿ ತಿಳಿಸಿದಾಗ ಚಿದಾನಂದ ಹಾಗೂ ಆತನ ಸಹಚರರು ಎಣಿಕೆ ನೆಪದಲ್ಲಿ ಕಲ್ಮೇಶ ಅವರನ್ನು ಶೆಡ್ಗೆ ಕರೆಸಿಕೊಂಡಿದ್ದರು. ಹಣ ತರುತ್ತಿದ್ದಂತೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಮೇಶ ಶೆಡ್ ಸುತ್ತಮುತ್ತ ತನ್ನ ಸಹಚರರನ್ನು ಕಾವಲಿಗೆ ನಿಯೋಜಿಸಿದ್ದರು. ಹೀಗಾಗಿ ಆರೋಪಿಗಳ ಕೃತ್ಯ ವಿಫಲವಾಗಿದ್ದು, ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಬಂಧಿತರಿಂದ 2.39 ಕೋಟಿ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಉಳಿದ ಹಣದ ಪತ್ತೆಗಾಗಿ ಶೋಧ ಮುಂದುವರಿದಿದೆ.

ಇದನ್ನೂ ಓದಿ:

ಇನ್ನೊಂದೆಡೆ, ಗನ್‌ಮ್ಯಾನ್ ಚಿದಾನಂದ ಕುರಬೆಟ್ ಬಂಧನ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಆದೇಶ ಹೊರಡಿಸಿದ್ದಾರೆ. ಪ್ರಕರಣ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Must Read

Skip to toolbar