November 8, 2026
Sunday, November 8, 2026
spot_img

ಹಬ್ಬದ ದಿನವೇ ದುರಂತ: ಮನೆ ಛಾವಣಿ ಕುಸಿದು 20 ದಿನದ ಕಂದಮ್ಮ, ತಾಯಿ ಸೇರಿ ಒಂದೇ ಕುಟುಂಬದ ಮೂವರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ಬೆಳಿಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೀರು ಸೋರಿಕೆಯಿಂದಾಗಿ ಮನೆಯೊಂದರ ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ 20 ದಿನಗಳ ಹಸುಗೂಸು, ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.‌

ಬೆಳಿಗ್ಗೆ 8:30 ರಿಂದ 9 ಗಂಟೆಯ ಅವಧಿಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ವಿನೋದಿನಿ ಶುಕ್ಲಾ (60), ಅವರ ಸೊಸೆ ಅಂಶಿಕಾ ಶುಕ್ಲಾ (28) ಮತ್ತು ಅಂಶಿಕಾ ಅವರ 20 ದಿನದ ಗಂಡು ಮಗು ಆರವ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅಂಶಿಕಾ ಅವರ ಪತಿ ಹರ್ಷ್ ಶುಕ್ಲಾ (32) ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಗುವನ್ನು ರಕ್ಷಿಸಲು ಹೋದ ತಾಯಿ

ಸ್ಥಳೀಯರು ಅವಶೇಷಗಳನ್ನು ತೆರವುಗೊಳಿಸಿದಾಗ ಕಂಡ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಛಾವಣಿ ಕುಸಿಯುವಾಗ ತಾಯಿ ಅಂಶಿಕಾ ತನ್ನ 20 ದಿನದ ಮುದ್ದಾದ ಕಂದಮ್ಮನಿಗೆ ಯಾವುದೇ ಪೆಟ್ಟು ಬೀಳಬಾರದೆಂದು ತನ್ನ ದೇಹವನ್ನೇ ಅಡ್ಡಲಾಗಿ ಇಟ್ಟು ರಕ್ಷಿಸಲು ಕೊನೆಯ ಕ್ಷಣದವರೆಗೂ ಹೋರಾಡಿದ್ದಾರೆ. ದುರದೃಷ್ಟವಶಾತ್ ಅವಶೇಷಗಳ ಭಾರಕ್ಕೆ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಅಂಶಿಕಾ ಮಗುವಿಗೆ ಹಾಲುಣಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

35 ವರ್ಷ ಹಳೆಯ ಮನೆ

ದುರಂತಕ್ಕೀಡಾದ  ಮನೆಯು ಸುಮಾರು 35 ವರ್ಷ ಹಳೆಯದಾಗಿತ್ತು. ಬೆಳಗಿನ ಜಾವ ಇಡೀ ಕುಟುಂಬ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದ್ದಾಗ ಈ ಅವಘಡ ಸಂಭವಿಸಿದೆ. ದೊಡ್ಡ ಶಬ್ದ ಕೇಳಿ ಧಾವಿಸಿ ಬಂದ ನೆರೆಹೊರೆಯವರು ಅವಶೇಷಗಳ ಅಡಿಯಲ್ಲಿದ್ದ ನಾಲ್ವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಮೂವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:

ದುರಂತಕ್ಕೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ನೀರು ಸೋರಿಕೆಯಿಂದಾಗಿ ಛಾವಣಿ ದುರ್ಬಲಗೊಂಡಿತ್ತು. ಅದರ ಮೇಲೆ ನೀರು ಸಂಗ್ರಹಗೊಂಡು ಭಾರ ಹೆಚ್ಚಾದ ಹಿನ್ನೆಲೆಯಲ್ಲಿ ಛಾವಣಿ ಕುಸಿದು ಬಿದ್ದಿದೆ ಎಂದು ಕಾನ್ಪುರ ಉಪ ಪೊಲೀಸ್ ಕಮಿಷನರ್ (DCP) ಎಸ್.ಎಂ. ಕಾಸಿಂ ಅಬಿದಿ ತಿಳಿಸಿದ್ದಾರೆ.

ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ.

Must Read

Skip to toolbar