November 8, 2026
Sunday, November 8, 2026
spot_img

ಮಗಳ ಜೊತೆಗೂಡಿ ಹಳೇ ದಿನಗಳ ದೀಪಾವಳಿ ಸಂಭ್ರಮ ಮೆಲುಕು ಹಾಕಿದ ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಅವರ ಪುತ್ರಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಆಚರಿಸುತ್ತಿದ್ದ ದೀಪಾವಳಿ ಹಬ್ಬದ ಅಪರೂಪದ ನೆನಪುಗಳನ್ನು ಜಂಟಿಯಾಗಿ ಮೆಲುಕು ಹಾಕಿದ್ದಾರೆ. ಸೋನಿಯಾ ಗಾಂಧಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಸಂಭಾಷಣೆಯಲ್ಲಿ, ತಮಗೆ ದೀಪಾವಳಿ ಹಬ್ಬವೆಂದರೆ ಎಷ್ಟು ಇಷ್ಟ ಮತ್ತು ಆ ದಿನಗಳಲ್ಲಿ ಗಾಂಧಿ ಕುಟುಂಬದಲ್ಲಿ ಹಬ್ಬದ ವಾತಾವರಣ ಹೇಗಿರುತ್ತಿತ್ತು ಎಂಬುದನ್ನು ಅತ್ಯಂತ ಆಪ್ತವಾಗಿ ಹಂಚಿಕೊಂಡಿದ್ದಾರೆ.

ಅಂದಿನ ದೀಪಾವಳಿಯೇ ಚಂದ

“ದೀಪಾವಳಿ ಎಂದರೆ ನನಗೆ ಪಂಚಪ್ರಾಣ, ಆ ದಿನಗಳು ಸದಾ ಸುಂದರ” ಎಂದು ಸೋನಿಯಾ ಗಾಂಧಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ಮನೆಯ ಪ್ರವೇಶ ದ್ವಾರದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು, ಮೊದಲ ದೀಪವನ್ನು ಅಲ್ಲೇ ಹಚ್ಚುತ್ತಿದ್ದೆವು. ಅಂದಿನ ಕಾಲದಲ್ಲಿ ಇಂದಿನ ತರಹದ ಪುಟ್ಟ ಚೀನಾ ಲೈಟ್‌ಗಳು ಇರುತ್ತಿರಲಿಲ್ಲ. ಬದಲಾಗಿ ಕೊಳದ ಸುತ್ತ, ಮೇಲ್ಛಾವಣಿ, ವರಾಂಡ ಮತ್ತು ಮನೆಯ ದಾರಿಯುದ್ದಕ್ಕೂ ಹಣತೆಗಳನ್ನೇ ಹಚ್ಚಿ ಅಲಂಕರಿಸುತ್ತಿದ್ದೆವು ಎಂದು ಅವರು ವಿವರಿಸಿದ್ದಾರೆ. ವಿಶೇಷವೆಂದರೆ, ಅಂದಿನ ಆ ಗಣೇಶನ ಮೂರ್ತಿ ಈಗಲೂ ಸೋನಿಯಾ ಅವರ ನಿವಾಸದಲ್ಲಿದೆ.

ಚಾಂದ್ನಿ ಚೌಕ್‌ಗೆ ಕರೆದೊಯ್ಯುತ್ತಿದ್ದ ರಾಜೀವ್

ಹಬ್ಬದ ಸಂಭ್ರಮದಲ್ಲಿ ಪಟಾಕಿ ಕೊಳ್ಳಲು ತಂದೆ ರಾಜೀವ್ ಗಾಂಧಿ ಅವರು ಮಕ್ಕಳನ್ನು ಹಳೇ ದೆಹಲಿಯ ಪ್ರಸಿದ್ಧ ‘ಚಾಂದ್ನಿ ಚೌಕ್’ ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಿದ್ದ ಕ್ಷಣಗಳನ್ನು ಪ್ರಿಯಾಂಕಾ ಗಾಂಧಿ ನೆನೆದಿದ್ದಾರೆ. ತಮಗೆ ಮತಾಪು ಎಂದರೆ ತುಂಬಾ ಇಷ್ಟವಿತ್ತೇ ಹೊರತು, ದೊಡ್ಡ ಶಬ್ದ ಮಾಡುವ ಪಟಾಕಿಗಳೆಂದರೆ ಇಷ್ಟವಿರಲಿಲ್ಲ ಎಂದು ಸೋನಿಯಾ ಹೇಳಿದ್ದಾರೆ.

ಕಣ್ಮರೆಯಾದ ನೀಲಾಕಾಶ, ಕಾಶ್ಮೀರಿ ಭೋಜನ

 ಅಂದಿನ ಕಾಲದ ಹಬ್ಬದ ದಿನಗಳಲ್ಲಿ ಪರಿಸರ ಎಷ್ಟೊಂದು ಶುದ್ಧವಾಗಿರುತ್ತಿತ್ತು ಎಂದರೆ, ಹಗಲಿನಲ್ಲಿ ಸ್ಪಷ್ಟವಾದ ನೀಲಿ ಆಕಾಶ ಕಾಣಿಸುತ್ತಿತ್ತು, ಆದರೆ ಇಂದಿನ ಮಾಲಿನ್ಯದ ದಿನಗಳಲ್ಲಿ ಅದನ್ನು ನೋಡುವುದೇ ಅಪರೂಪವಾಗಿದೆ ಎಂದು ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ಹಬ್ಬದ ದಿನಗಳಲ್ಲಿ ಕುಟುಂಬಸ್ಥರೆಲ್ಲ ಸೇರಿ ಸಾಂಪ್ರದಾಯಿಕ ಕಾಶ್ಮೀರಿ ಶೈಲಿಯ ಊಟ ಮತ್ತು ಸಿಹಿ ಅಡುಗೆ ಸವಿಯುತ್ತಿದ್ದೆವು, ಆ ಸಂಪ್ರದಾಯ ಇಂದಿಗೂ ತಮ್ಮ ಮನೆಯಲ್ಲಿ ಮುಂದುವರಿದಿದೆ ಎಂದಿದ್ದಾರೆ.

ಇದನ್ನೂ ಓದಿ:

ನವೆಂಬರ್ 10 ಕ್ಕೆ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ

ಇದೇ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಬರೆದಿರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ಎಂಬ ಆತ್ಮಕಥೆಯು ನವೆಂಬರ್ 10 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. 79 ವರ್ಷದ ಸೋನಿಯಾ ಗಾಂಧಿ ಅವರು ಎರಡನೇ ಮಹಾಯುದ್ಧದ ನಂತರದ ಇಟಲಿಯಲ್ಲಿ ಕಳೆದ ತಮ್ಮ ಬಾಲ್ಯ, ರಾಜೀವ್ ಗಾಂಧಿ ಅವರೊಂದಿಗೆ ಕೇಂಬ್ರಿಡ್ಜ್‌ನಲ್ಲಿ ಚಿಗುರಿದ ಪ್ರೀತಿ, ಭಾರತಕ್ಕೆ ಬಂದ ಘಟನಾವಳಿಗಳು ಹಾಗೂ ಅತ್ತೆ ಇಂದಿರಾ ಗಾಂಧಿ ಮತ್ತು ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಅನುಭವಿಸಿದ ವೈಯಕ್ತಿಕ ನಷ್ಟಗಳ ಸುದೀರ್ಘ ಪಯಣವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

Must Read

Skip to toolbar