ಹೊಸದಿಗಂತ ವರದಿ ಚಿತ್ರದುರ್ಗ:
ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿ ತೀವ್ರ ಬರದ ಛಾಯೆ ಆವರಿಸಿದೆ. ಇಂತಹ ಬರದ ನಡುವೆಯೂ ಬೆಳಕಿನ ಹಬ್ಬದ ದೀಪಾವಳಿ ಆಚರಣೆಗೆ ಕೋಟೆನಾಡಿನ ಜನತೆ ಮುಂದಾಗಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಭಾನುವಾರ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಸಿದ್ಧತೆಗೆ ಅಗತ್ಯವಿರುವ ವಸ್ತುಗಳನ್ನು ಜನರು ಮುಗಿಬಿದ್ದು ಖರೀದಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನ, ಗಾಂಧಿ ವೃತ್ತ, ಸೂಪರ್ ಮಾರುಕಟ್ಟೆ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು ಹೂವು, ಬಾಳೆ ಕಂಬ, ಮಾವಿನ ಸೊಪ್ಪು, ಕವುಚಿ ಹುಲ್ಲು, ಬ್ರಹ್ಮದಂಡೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಕಿನ ಹಬ್ಬವಾದ್ದರಿಂದ ವಿವಿಧ ಬಗೆಯ ಬಣ್ಣ ಬಣ್ಣದ ದೀಪಗಳು, ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸುತ್ತಿದ್ದರು.
ನರಕ ಚತುರ್ದಶಿ, ಅಮವಾಸ್ಯೆ, ಬಲಿಪಾಡ್ಯಮಿ ನಿಮಿತ್ತ ಮನೆಗಳು ಸೇರಿದಂತೆ ಬಹುತೇಕ ಎಲ್ಲ ರೀತಿಯ ಅಂಗಡಿ ಮಳಿಗೆಗಳಲ್ಲಿ ದೀಪಾವಳಿಯ ವಿಶೇಷ ಪೂಜೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆಕಾಶ ಬುಟ್ಟಿ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಇಟ್ಟು ಅಂಗಡಿ ಮಳಿಗೆಗೆಗಳನ್ನು ಸಿಂಗರಿಸಿದ್ದರು. ಮತ್ತೆ ಕೆಲವರು ತಮ್ಮ ಮನೆಗಳನ್ನು ಲಕ್ಷ್ಮಿಪೂಜೆ ನೆರವೇರಿಸಲು ವಿವಿಧ ಅಲಂಕಾರಗಳನ್ನು ಮಾಡುವಲ್ಲಿ ನಿರತರಾಗಿದ್ದರು.
ಇಂದು ನರಕ ಚತುದರ್ಶಿ, ನಾಳೆ ಅಮವಾಸ್ಯೆ ಹಾಗೂ ನಾಡಿದ್ದು ಬಲಿಪಾಡ್ಯಮಿ ಪ್ರಯುಕ್ತ ಲಕ್ಷ್ಮೀಪೂಜೆ, ಗೋಪೂಜೆ ಸೇರಿದಂತೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಸುವ ಸಲುವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಯಾರಿ ನಡೆಸಿದರು. ನಗರದ ಬಹುತೇಕ ವರ್ತಕರು ತಮ್ಮ ಅಂಗಡಿ ಮಳಿಗೆಗಳನ್ನು ಸ್ವಚ್ಛಗೊಳಿಸಿ ಧನಲಕ್ಷ್ಮಿ ಪೂಜೆಗೆ ಅಣಿಗೊಳಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ದೀಪಾವಳಿ ಹಬ್ಬದ ಅಂಗವಾಗಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ಗುಲಾಬಿ, ಸೂಜಿ ಮಲ್ಲಿಗೆ ಹೂವುಗಳು ಸೇರಿದಂತೆ ಎಲ್ಲ ಬಗೆಯ ಹೂವಿನ ಹಾರಗಳ ದರಗಳಲ್ಲಿ ತೀವರ ಹೆಚ್ಚಳ ಕಂಡುಬಂತು. ಇನ್ನು ಲಕ್ಷ್ಮಿಪೂಜೆಗೆ ಅಗತ್ಯವಾಗಿ ಬೇಕಿರುವ ಸೇಬು, ದ್ರಾಕ್ಷಿ, ಮೋಸಂಬಿ, ಸಪೋಟಾ, ಕಿತ್ತಳೆ, ದಾಳಿಂಬೆ, ಬಾಳೆ ಹಣ್ಣುಗಳು ಸಹ ಹೆಚ್ಚಿನ ಬೆಲೆಗೆ ಖರಿದಿಯಾಗುತ್ತಿದ್ದವು. ಹಬ್ಬದ ಕಾರಣ ಜನರು ದರವನ್ನು ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದ್ದರು.
ಇದನ್ನೂ ಓದಿ:
ದೀಪಾವಳಿ ಅಂಗಮವಾಗಿ ವಿವಿಧ ದೇಗುಗಳನ್ನು ವಿಶೇಷ ಪೂಜೆ:
ನಗರದ ವಿವಿಧ ದೇವಾಲಯಗಳಲ್ಲಿ ನರಕ ಚತುರ್ದಶಿ ಅಂಗವಾಗಿ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಬ್ಬದ ಅಂಗವಾಗಿ ಜನರು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. ದೀಪಾವಳಿ ಅಮವಾಸ್ಯೆ ಹಾಗೂ ಬಲಿಪಾಡ್ಯಮಿ ಪ್ರಯುಕ್ತವೂ ವಿಶೇಷ ಪೂಜೆ ನೆರವೇರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.



