ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಭಾನುವಾರ ಅವಘಡವೊಂದು ಸಂಭವಿಸಿದೆ. ನಿಲ್ದಾಣದ ಪ್ರಮುಖ ಟರ್ಮಿನಲ್ 2 ರ ಹೊರಭಾಗದ ಮೇಲ್ಛಾವಣಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಗಾಯಗೊಂಡಿದ್ದಾರೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟದಿಂದ ಸದಾ ಬ್ಯುಸಿಯಾಗಿರುವ ಟರ್ಮಿನಲ್ 2 ಕಟ್ಟಡದ ಹೊರಗಡೆ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಭದ್ರತೆ ಮತ್ತು ನಿರ್ವಹಣೆಯ ಕುರಿತು ಆತಂಕ ಮೂಡಿಸಿದೆ.
ತಪ್ಪಿದ ದೊಡ್ಡ ಅನಾಹುತ
ವಿಮಾನ ನಿಲ್ದಾಣದ ಅಧಿಕೃತ ಮೂಲಗಳ ಪ್ರಕಾರ, ಟರ್ಮಿನಲ್ ಕಟ್ಟಡದ ಹೊರಭಾಗದಲ್ಲಿದ್ದ ಫಾಲ್ಸ್ ಸೀಲಿಂಗ್‌ನ ಸಣ್ಣ ಭಾಗವೊಂದು ದಿಢೀರನೆ ಕುಸಿದು ಕೆಳಗೆ ಬಿದ್ದಿದೆ. ಈ ವೇಳೆ ಅಲ್ಲಿಗೆ ಬಂದಿದ್ದ ಸಂದರ್ಶಕರೊಬ್ಬರ ಮೇಲೆ ಅವಶೇಷಗಳು ಬಿದ್ದಿದ್ದು, ಅವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಪ್ರಮಾಣದಲ್ಲಿ ಸೀಲಿಂಗ್ ಕುಸಿಯದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
ತಕ್ಷಣದ ವೈದ್ಯಕೀಯ ನೆರವು
ಘಟನೆ ನಡೆದ ತಕ್ಷಣವೇ ಅಲರ್ಟ್ ಆದ ವಿಮಾನ ನಿಲ್ದಾಣದ ತುರ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಗೊಂಡ ವ್ಯಕ್ತಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಆರೈಕೆ ಮಾಡಲಾಗಿದೆ. ಆದರೆ, ಗಾಯಗೊಂಡ ವ್ಯಕ್ತಿಯ ಗುರುತು ಹಾಗೂ ಗಾಯದ ತೀವ್ರತೆ ಎಷ್ಟಿದೆ ಎಂಬ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಅಧಿಕಾರಿಗಳಿಂದ ತನಿಖೆಗೆ ಆದೇಶ
ಸದಾ ಹದ್ದಿನ ಕಣ್ಣಿನ ಕಾವಲಿರುವ ಇಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇಲ್ಛಾವಣಿ ಕುಸಿದಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಈ ಸೀಲಿಂಗ್ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿಮಾನ ನಿಲ್ದಾಣದ ಪ್ರಾಧಿಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ:
ರಚನಾತ್ಮಕ ಸುರಕ್ಷತೆ ಪರಿಶೀಲನೆಷದಸ
ಮುನ್ನೆಚ್ಚರಿಕಾ ಕ್ರಮವಾಗಿ, ಕುಸಿದು ಬಿದ್ದ ಸೀಲಿಂಗ್‌ನ ಸುತ್ತಮುತ್ತಲಿನ ಇತರ ಭಾಗಗಳು ಎಷ್ಟು ಗಟ್ಟಿಯಾಗಿವೆ? ಅಲ್ಲಿ ಏನಾದರೂ ಅಪಾಯವಿದೆಯೇ? ಎಂಬುದನ್ನು ಪರಿಶೀಲಿಸಲು ತಜ್ಞರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲಿನ ಜಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.



