ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಮೂಲಸೌಕರ್ಯಕ್ಕೆ ಹೊಸ ರೂಪ ನೀಡಲು ಮತ್ತು ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ನಾಳಿನ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಬೆಂಗಳೂರಿಗರಿಗೆ ಹಲವು ಪ್ರಮುಖ ಕೊಡುಗೆ ಹಾಗೂ ಹೊಸ ಯೋಜನೆಗಳು ಪ್ರಕಟವಾಗುವ ಸಾಧ್ಯತೆಯಿದೆ.
ಸಂಚಾರ ದಟ್ಟಣೆಗೆ ಮುಕ್ತಿ
ಬೆಂಗಳೂರಿನ ಪ್ರಮುಖ ತಲೆನೋವಾಗಿರುವ ಟ್ರಾಫಿಕ್ ಜಾಮ್ ನಿಯಂತ್ರಿಸುವುದು, ವ್ಯವಸ್ಥಿತ ನಗರಾಭಿವೃದ್ಧಿಗೆ ವೇಗ ನೀಡುವುದು ಹಾಗೂ ಸಾರ್ವಜನಿಕರ ನಿವೇಶನ ಮತ್ತು ವಸತಿ ಸಂಬಂಧಿತ ಹಳೆಯ ಬಾಕಿ ಸಮಸ್ಯೆಗಳನ್ನು ಬಗೆಹರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಅಕ್ರಮ ಮನೆಗಳ ಸಕ್ರಮಕ್ಕೆ ರಿಯಾಯಿತಿ
ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 12 ವರ್ಷಗಳಿಗಿಂತ ಹಳೆಯದಾದ ಮನೆಗಳನ್ನು ನಿಯಮ 38(ಡಿ) ಅಡಿಯಲ್ಲಿ ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇದರ ಭಾಗವಾಗಿ ಗೈಡೆನ್ಸ್ ವ್ಯಾಲ್ಯೂ ಆಧಾರಿತ ಶುಲ್ಕವನ್ನು ಶೇ. 50 ರಷ್ಟು ಕಡಿತಗೊಳಿಸಲಾಗಿದೆ.
ಡಿಜಿಟಲ್ ಸಿಸ್ಟಮ್ಗೆ ಚಾಲನೆ
ಈ ಯೋಜನೆಗಳ ಅಡಿಯಲ್ಲಿ ಸಾರ್ವಜನಿಕರು ದಂಡ ಪಾವತಿಸಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸಂಪೂರ್ಣ ಆನ್ಲೈನ್ ವ್ಯವಸ್ಥೆಗೆ ಮುಖ್ಯಮಂತ್ರಿಗಳು ನಾಳೆ ಚಾಲನೆ ನೀಡುವ ಸಾಧ್ಯತೆಯಿದೆ. ಚಾಲ್ತಿಯಲ್ಲಿರುವ ಬಿಡಿಎ ಯೋಜನೆಗಳ ಸದ್ಯದ ಸ್ಥಿತಿ, ಭೂಸ್ವಾಧೀನ ಪ್ರಕ್ರಿಯೆಯ ವೇಗ, ಆಡಳಿತಾತ್ಮಕ ಮತ್ತು ಹಣಕಾಸಿನ ವಿಚಾರಗಳನ್ನು ಪರಿಶೀಲಿಸಲಿರುವ ಸಿಎಂ, ನಿಗದಿತ ಕಾಲಮಿತಿಯೊಳಗೆ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಲಿದ್ದಾರೆ.
ಇದನ್ನೂ ಓದಿ:
ನಾಳೆ ಬಿಡಿಎ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ಹಮ್ಮಿಕೊಂಡು, ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.



