ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 2027ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 627 ಕೋಟಿ ಭಾರಿ ನಷ್ಟ ಅನುಭವಿಸುವ ಆತಂಕದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಪ್ರತಿಷ್ಠಿತ ‘ಆ್ಯಶಸ್ ಸರಣಿ’ ಆಯೋಜಿಸುತ್ತಿದ್ದರೂ ಸಹ ಇಷ್ಟೊಂದು ದೊಡ್ಡ ನಷ್ಟ ಎದುರಾಗುತ್ತಿರುವುದು ಇಡೀ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದೆ.
ಈ ದೊಡ್ಡ ನಷ್ಟಕ್ಕೆ ಪ್ರಮುಖ ಕಾರಣ 2027ರ ವೇಳಾಪಟ್ಟಿಯಲ್ಲಿ ಭಾರತ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳದಿರುವುದು. ಭಾರತ ತಂಡ ಪ್ರವಾಸ ಕೈಗೊಂಡಾಗ ಜಾಹೀರಾತು ಹಾಗೂ ಟಿವಿ ವೀಕ್ಷಕರ ಸಂಖ್ಯೆ ಗಗನಕ್ಕೇರುತ್ತದೆ. ಆದರೆ 2027ರಲ್ಲಿ ಇಂಗ್ಲೆಂಡ್ ತಂಡವೇ ಭಾರತಕ್ಕೆ ಬರಲಿರುವುದರಿಂದ, ಸೋನಿ ಪಿಕ್ಚರ್ಸ್ ಜೊತೆಗಿನ ಪ್ರಸಾರ ಹಕ್ಕುಗಳ ಒಪ್ಪಂದದಿಂದ ಬರುವ ಆದಾಯ ತೀವ್ರ ಕುಸಿತ ಕಾಣಲಿದೆ. ಇದು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಕ್ಲಬ್‌ಗಳಿಗೂ ತೀವ್ರ ಹಣಕಾಸಿನ ಸಂಕಷ್ಟ ತಂದೊಡ್ಡಲಿದೆ.
ಮತ್ತೊಂದೆಡೆ, ಜಾಗತಿಕ ಟಿವಿ ಮಾರುಕಟ್ಟೆಯಲ್ಲಿ ರಿಲಯನ್ಸ್ ಹಾಗೂ ಡಿಸ್ನಿ ಸ್ಟಾರ್ ವಿಲೀನದ ಬಳಿಕ ಪೈಪೋಟಿ ಕಡಿಮೆಯಾಗಿದೆ. ಇದರಿಂದಾಗಿ ಡಿಸ್ನಿ ಸ್ಟಾರ್ ತನ್ನ ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದೆ ಸರಿಯಲುತ್ನಿಸುತ್ತಿದ್ದು, ಭವಿಷ್ಯದ ಬಿಡ್ ಮೌಲ್ಯ ಕುಸಿಯುವ ಭೀತಿಗೆ ಐಸಿಸಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸದಸ್ಯ ರಾಷ್ಟ್ರಗಳಿಗೆ ನೀಡಬೇಕಾದ ಪ್ರಸಾರ ಹಕ್ಕಿನ ಲಾಭಾಂಶದ ಪಾವತಿಯನ್ನು ಐಸಿಸಿ ತಾತ್ಕಾಲಿಕವಾಗಿ ಕಡಿತಗೊಳಿಸಿದೆ.
2025ರಲ್ಲಿ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಿದ್ದಾಗ ಇಸಿಬಿ 158 ಕೋಟಿಗಿಂತಲೂ ಹೆಚ್ಚು ಲಾಭ ಗಳಿಸಿತ್ತು. ಆದರೆ ಕೇವಲ ಒಂದು ವರ್ಷ ಭಾರತದ ಪ್ರವಾಸವಿಲ್ಲದೇ ಹೋದ ತಕ್ಷಣವೇ ಇಂಗ್ಲೆಂಡ್ ಮಂಡಳಿ ಇಷ್ಟು ದೊಡ್ಡ ಬಿಕ್ಕಟ್ಟಿಗೆ ಸಿಲುಕಿರುವುದು ಮಾಡ್ರನ್ ಕ್ರಿಕೆಟ್ ನಲ್ಲಿ ಬಿಸಿಒಸಿಐ ಹಾಗೂ ಭಾರತೀಯ ಪ್ರೇಕ್ಷಕರ ಮಹತ್ವ ಎಷ್ಟಿದೆ ಎಂಬುದನ್ನು ಸಾರುತ್ತದೆ. ನಷ್ಟವನ್ನು ಕನಿಷ್ಠ 439 ಕೋಟಿ ಇಳಿಸಲು ಇಸಿಬಿ ಈಗಿನಿಂದಲೇ ಹೊಸ ವಾಣಿಜ್ಯ ಹಾದಿಗಳನ್ನು ಹುಡುಕುತ್ತಿದೆ.



