ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಕಾರ್ಯಕ್ರಮ, ಮೆಟ್ರೋ ನಿಲ್ದಾಣಗಳು ಹಾಗೂ ನಟ ಅಮಿತಾಭ್ ಬಚ್ಚನ್ ಅವರ ನಿವಾಸದ ಸುತ್ತ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಆಯುಕ್ತರ ಇ-ಮೇಲ್ಗೆ ಬೆದರಿಕೆ ಸಂದೇಶ
ನವೆಂಬರ್ 9ರಂದು ಬೆಳಗ್ಗೆ ಸುಮಾರು 11.35ಕ್ಕೆ ಮಹಾನಗರ ಪಾಲಿಕೆ ಆಯುಕ್ತರ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ. ‘ವೀಟ್ ಸ್ಮಿತ್’ ಎಂಬ ಹೆಸರಿನಲ್ಲಿ ಕಳುಹಿಸಲಾಗಿರುವ ಈ ಮೇಲ್ನಲ್ಲಿ ಖಲಿಸ್ತಾನ್ ಪರ ಘೋಷಣೆಗಳಿದ್ದು, 1984ರ ಸಿಖ್ ವಿರೋಧಿ ಗಲಭೆಗಳ ಉಲ್ಲೇಖವೂ ಇದೆ. ಖಲಿಸ್ತಾನ್ ನ್ಯಾಷನಲ್ ಆರ್ಮಿ ಮತ್ತು ಬಬ್ಬರ್ ಖಾಲ್ಸಾ (ಪರ್ಮಾರ್-ಕೆನಡಾ) ಸಂಘಟನೆಗಳ ಹೆಸರುಗಳನ್ನೂ ಸಂದೇಶದಲ್ಲಿ ಪ್ರಸ್ತಾಪಿಸಲಾಗಿದೆ.
ಬೆಂಗಳೂರಿನ ಕಾರ್ಯಕ್ರಮ, ಮೆಟ್ರೋಗೆ ಎಚ್ಚರಿಕೆ
ನವೆಂಬರ್ 29ರಂದು ಬೆಂಗಳೂರಿನ NICE ಸೆಂಟರ್ ಸ್ಟೇಜ್ನಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿ ಐಇಡಿ ಸ್ಫೋಟ ನಡೆಸುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ. ನವೆಂಬರ್ 27ರಂದು ನಟ ಅಮಿತಾಭ್ ಬಚ್ಚನ್ ಅವರ ಮನೆಯ ಸಮೀಪವೂ ಸ್ಫೋಟ ಸಂಭವಿಸಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಸ್ಫೋಟಕಗಳನ್ನು ಇರಿಸಿರುವುದಾಗಿ ಹೇಳಿಕೊಂಡು, ನವೆಂಬರ್ 29ರಂದು ಮೆಟ್ರೋ ಪ್ರಯಾಣ ಮಾಡದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ:
ಸಂದೇಶದಲ್ಲಿ ಮಧ್ಯಾಹ್ನ 3.11ರಿಂದ ರಾತ್ರಿ 11.11ರವರೆಗಿನ ಸಮಯವನ್ನೂ ಉಲ್ಲೇಖಿಸಲಾಗಿದೆ. NICE ಮೈದಾನಕ್ಕೆ ತೆರಳದಂತೆ ಹಾಗೂ ಎಲ್ಲಾದರೂ ಬಿದ್ದಿರುವ ಐಫೋನ್ಗಳನ್ನು ಮುಟ್ಟದಂತೆ ವಿಚಿತ್ರ ಸೂಚನೆ ನೀಡಲಾಗಿದೆ.
ತನಿಖೆಯಿಂದಲೇ ಸತ್ಯಾಂಶ ಬಹಿರಂಗ
ಈ ಇ-ಮೇಲ್ನ ಮೂಲ, ಬೆದರಿಕೆಯ ವಿಶ್ವಾಸಾರ್ಹತೆ ಮತ್ತು ಇದರ ಹಿಂದೆ ಇರುವವರ ಕುರಿತು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಸಂದೇಶವನ್ನು ಗಂಭೀರವಾಗಿ ಪರಿಶೀಲಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.



