ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣವಾಗುತ್ತಿದೆಯೇ? ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆಯೇ?, ಎಂಜಿನ್ಗಳಿಗೆ ಹಾನಿಯಾಗುತ್ತಿದೆಯೇ? ಇಂತಹ ಪ್ರಶ್ನೆಗಳ ನಡುವೆಯೇ ಕೇರಳ ಸರ್ಕಾರ ಇಂಧನ ಗುಣಮಟ್ಟದ ಪರಿಶೀಲನೆಗೆ ಮುಂದಾಗಿದೆ. ರಾಜ್ಯದಾದ್ಯಂತ ಪೆಟ್ರೋಲ್ ಬಂಕ್ಗಳಲ್ಲಿ ದಿಢೀರ್ ತಪಾಸಣೆ ನಡೆಸಿ, ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಆದೇಶಿಸಿದೆ.
ಶೇ.20 ಮಿತಿ ಮೀರಿದೆಯೇ ಎಂಬ ಪರಿಶೀಲನೆ
ಕಾನೂನುಬದ್ಧವಾಗಿ ನಿಗದಿಪಡಿಸಿರುವ ಶೇ.20ರ ಎಥೆನಾಲ್ ಮಿತಿಯನ್ನು ಪೆಟ್ರೋಲ್ನಲ್ಲಿ ಮೀರುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವುದು ಈ ಕಾರ್ಯಾಚರಣೆಯ ಉದ್ದೇಶ. ಕೊಚ್ಚಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೆಟ್ರೋಲ್ ಬಂಕ್ಗಳಿಗೆ ಭೇಟಿ ನೀಡಿ E20 ಇಂಧನದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಚೆಂಬುಮುಕ್ಕುವಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಅಧಿಕಾರಿಗಳು ಆರು ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಪೈಕಿ ಎರಡು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಗ್ರಾಹಕರಿಗೆ ಇಂಧನದ ಗುಣಮಟ್ಟ ತಿಳಿಯಬೇಕು
ಕೇರಳ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಅನೂಪ್ ಜೇಕಬ್, ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿನ ಬಂಕ್ಗಳಿಂದ ಮಾದರಿಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರಿ ರಾಸಾಯನಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದ ಬಳಿಕ ಫಲಿತಾಂಶ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:
ಎಥೆನಾಲ್ ಪ್ರಮಾಣ ಹೆಚ್ಚಿರುವುದರಿಂದ ವಾಹನಗಳ ಮೈಲೇಜ್ ಹಾಗೂ ಎಂಜಿನ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಇಂಧನದ ನಿಖರ ಗುಣಮಟ್ಟ ತಿಳಿಯುವ ಹಕ್ಕಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ ವರದಿ ಬಳಿಕ ಕೇರಳದ ಕ್ರಮ
ಕರ್ನಾಟಕದಲ್ಲಿ 63 ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಕೆಲವು ಕಡೆ ಶೇ.26ರಿಂದ 31ರವರೆಗೆ ಎಥೆನಾಲ್ ಪತ್ತೆಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಕೇಂದ್ರ ತೈಲ ಸಚಿವಾಲಯ ಈ ವರದಿಯನ್ನು ತಳ್ಳಿಹಾಕಿದ್ದು, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 893 ಮಾದರಿಗಳು ಗುಣಮಟ್ಟದ ಮಾನದಂಡ ಪೂರೈಸಿವೆ ಎಂದು ಹೇಳಿದೆ.
ಹೀಗಾಗಿ ಎಥೆನಾಲ್ ಮಿಶ್ರಣದ ಕುರಿತ ವಿವಾದಕ್ಕೆ ಪ್ರಯೋಗಾಲಯದ ಅಧಿಕೃತ ವರದಿಗಳೇ ಸ್ಪಷ್ಟ ಉತ್ತರ ನೀಡಬೇಕಿದೆ. ಇಂಧನದ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಮೂಡಿರುವ ಅನುಮಾನ ದೂರವಾಗಲು ಪಾರದರ್ಶಕ ಪರೀಕ್ಷೆ ಮತ್ತು ನಿಖರ ಫಲಿತಾಂಶ ಅತ್ಯಗತ್ಯವಾಗಿದೆ.



