ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಹಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಣಬಾಲಿ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಕಳೆದ ಅಕ್ಟೋಬರ್ 16ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಇದೀಗ ನವೆಂಬರ್ 11ರಂದು ಪ್ರಸಿದ್ಧ ಒಟಿಟಿ ಸಂಸ್ಥೆಯಾದ ‘ನೆಟ್ಫ್ಲಿಕ್ಸ್’ನಲ್ಲಿ ಪ್ರಸಾರವಾಗಲಿದೆ.
‘ರಣಬಾಲಿ’ ಚಿತ್ರವು 19ನೇ ಶತಮಾನದ ಅಂದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕಾಲದ ರಾಯಲಸೀಮೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಅಲ್ಲಿನ ಜನರನ್ನು ಕೀಳಾಗಿ ಕಾಣುತ್ತಿದ್ದ ಕ್ರೂರ ಬ್ರಿಟಿಷ್ ಅಧಿಕಾರಿಯ ವಿರುದ್ಧ ಸಶಸ್ತ್ರ ಹೋರಾಟ ನಡೆಸುವ ‘ಸಿಂಗನಮಲ ಬೊಬ್ಬಲಿ ರಾಣಾಬಾಲಿ’ ಎಂಬ ವೀರನ ಕಥೆಯನ್ನು ಈ ಸಿನಿಮಾ ಹೊಂದಿದೆ. ವಿಚಿತ್ರ ಪರಿಸ್ಥಿತಿಗಳಲ್ಲಿ ಜನಿಸಿ, ಒಂದು ಮಹೋದ್ದೇಶಕ್ಕಾಗಿ ಬ್ರಿಟಿಷರ ವಿರುದ್ಧ ತೊಡೆತಟ್ಟುವ ನಾಯಕನ ಸಾಹಸಗಾಥೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ.
ಈ ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ರಾಹುಲ್ ಸಾಂಕೃತ್ಯಾಯನ ನಿರ್ದೇಶಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಭಾರಿ ಬಂಡವಾಳ ಹೂಡಿ ನಿರ್ಮಿಸಿದೆ. ಸಿನಿಮಾಗೆ ಮತ್ತಷ್ಟು ಮೆರುಗು ನೀಡಲು ಹಾಲಿವುಡ್ನ ಪ್ರಸಿದ್ಧ ನಟರನ್ನು ಕೂಡ ಬಳಸಿಕೊಳ್ಳಲಾಗಿತ್ತು. ಮೊದಲ ದಿನ ಬೆಳಿಗ್ಗೆ ಪ್ರದರ್ಶನ ಕಾಣುತ್ತಿದ್ದಂತೆಯೇ ಚಿತ್ರತಂಡ ಸಂಜೆ ಸಕ್ಸಸ್ ಪಾರ್ಟಿ ಆಚರಿಸಿಕೊಂಡು ಗಮನ ಸೆಳೆದಿತ್ತು.
ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡ ‘ರಣಬಾಲಿ’, ಒಟಿಟಿಯಲ್ಲಿ ಹೊಸ ರೀತಿಯ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. ನೆಟ್ಫ್ಲಿಕ್ಸ್ ಸಂಸ್ಥೆಯು “ಸಿಂಗನಮಲ ಬೊಬ್ಬಲಿ ರಾಣಾಬಾಲಿ ಒಸ್ತುನ್ನಾಡು” ಎಂದು ಅಧಿಕೃತವಾಗಿ ಪೋಸ್ಟ್ ಹಂಚಿಕೊಂಡಿದ್ದು, ನವೆಂಬರ್ 11ರಿಂದ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.



