ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚಳಿ-ಬಿಸಿಲಿನ ವಾತಾವರಣ ಮುಂದುವರಿದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆಯ ಲಕ್ಷಣಗಳಿಲ್ಲ. ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಹವಾಮಾನ ವಲಯದಲ್ಲಿ ಕುತೂಹಲ ಮೂಡಿಸಿದೆ.
ನವೆಂಬರ್ 14, 15ರಂದು ಚಂಡಮಾರುತ ಸಾಧ್ಯತೆ
ಹವಾಮಾನ ತಜ್ಞರ ಅಂದಾಜಿನ ಪ್ರಕಾರ, ನವೆಂಬರ್ 13ರ ವೇಳೆಗೆ ಶ್ರೀಲಂಕಾದ ಪೂರ್ವ ಕರಾವಳಿ ಸಮೀಪ ಪ್ರಬಲ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇದು ಮತ್ತಷ್ಟು ಬಲ ಪಡೆದು ನವೆಂಬರ್ 14 ಅಥವಾ 15ರ ಹೊತ್ತಿಗೆ ಚಂಡಮಾರುತದ ಸ್ವರೂಪ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಒಣ ಹವೆಯೇ ಮುಂದುವರಿಕೆ
ಈ ಹವಾಮಾನದ ಪರಿಣಾಮ ಕರ್ನಾಟಕದ ಮೇಲೆ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದ್ದು, ಹಗಲಿನಲ್ಲಿ ಬಿಸಿಲು ಮತ್ತು ರಾತ್ರಿ ವೇಳೆ ತಂಪಿನ ವಾತಾವರಣ ಕಂಡುಬರಬಹುದು. ಕೊಡಗು ಜಿಲ್ಲೆಯ ಕೆಲವೆಡೆ ಮಾತ್ರ ಹಗುರ ತುಂತುರು ಮಳೆಯ ಸಾಧ್ಯತೆಯನ್ನು ಅಂದಾಜಿಸಲಾಗಿದೆ.



