November 10, 2026
Tuesday, November 10, 2026
spot_img

ದೆಹಲಿಯ ಹೆಸರಿನಲ್ಲಿ ಢಾಕಾ ಕೊಳಚೆ ಪ್ರದೇಶಗಳ ವಿಡಿಯೋ: ಚೀನಿ ವ್ಲಾಗರ್‌ಗಳ ವಿರುದ್ಧ ಭಾರತ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ವಿದೇಶಿ ನೆಲದಲ್ಲಿ ತಪ್ಪು ಚಿತ್ರಣ ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಇದೀಗ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬಾಂಗ್ಲಾದೇಶದ ಢಾಕಾದ ಬಡಾವಣೆಗಳು ಹಾಗೂ ಕೊಳಚೆ ಪ್ರದೇಶಗಳನ್ನು ನವದೆಹಲಿಯ ಭಾಗಗಳೆಂದು ಬಿಂಬಿಸಿ, ಚೀನಾದ ಕೆಲವು ವ್ಲಾಗರ್‌ಗಳು ವಿಡಿಯೋ ಮಾಡುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದೆ.

ತಪ್ಪು ಚಿತ್ರಣಕ್ಕೆ ಭಾರತದ ಆಕ್ಷೇಪ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಭಾರತ ಗಮನಿಸಿದೆ. ಯಾವುದೇ ದೇಶದ ಬಗ್ಗೆ ಉದ್ದೇಶಪೂರ್ವಕವಾಗಿ ವಿಕೃತ ಚಿತ್ರಣ ನೀಡುವ ಪ್ರಯತ್ನಗಳು ಖಂಡನೀಯ ಎಂದು ಅವರು ಹೇಳಿದ್ದಾರೆ.

ಹಣದ ಆಮಿಷವೊಡ್ಡಿ ವಿದೇಶಿ ವ್ಯಕ್ತಿಗಳ ಮೂಲಕ ಢಾಕಾವನ್ನು ದೆಹಲಿಯಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. ಇಂತಹ ಸುಳ್ಳು ನಿರೂಪಣೆಗಳು ಅದನ್ನು ಸೃಷ್ಟಿಸುವವರ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಢಾಕಾದ ಬಡಾವಣೆಗಳಲ್ಲಿ ಚಿತ್ರೀಕರಣ

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಉತ್ತರಾ ಸೆಕ್ಟರ್ 12 ಮತ್ತು ಸಮೀಪದ ಟೆಕ್ಪಾರಾ ಪ್ರದೇಶಗಳಲ್ಲಿ ಚೀನಾದ ಹಲವು ವ್ಲಾಗರ್‌ಗಳು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಅಂದಾಜಿನಂತೆ 150ಕ್ಕೂ ಹೆಚ್ಚು ಚೀನಿ ಪ್ರಜೆಗಳು ಈ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:

ಎರಡು ಮೊಬೈಲ್‌ಗಳನ್ನು ಬಳಸಿಕೊಂಡು ಗಂಟೆಗಟ್ಟಲೆ ಲೈವ್ ಪ್ರಸಾರ ಮಾಡುವುದು, ಕಿರಿದಾದ ರಸ್ತೆಗಳು ಮತ್ತು ಮನೆಗಳ ಒಳಗೂ ಚಿತ್ರೀಕರಣ ನಡೆಸುವುದು ವರದಿಯಾಗಿದೆ. ಭಾರತದ ಸ್ವಚ್ಛತೆ, ಆಹಾರ ಪದ್ಧತಿ ಮತ್ತು ಜೀವನಮಟ್ಟವನ್ನು ಅವಹೇಳನ ಮಾಡುವ ರೀತಿಯಲ್ಲಿ ವಿಡಿಯೋಗಳನ್ನು ರೂಪಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ವಿಡಿಯೋಗಳ ಹಿಂದಿನ ಉದ್ದೇಶವೇನು?

ಈ ಚಟುವಟಿಕೆಗಳ ನಿಜವಾದ ಉದ್ದೇಶ ಮತ್ತು ವಿಡಿಯೋಗಳ ಬಳಕೆಯ ಬಗ್ಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಭಾರತವೂ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಮಾಹಿತಿ ಹರಡುವ ಪ್ರಯತ್ನಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳ ಕ್ರಮದತ್ತ ಗಮನ ನೆಟ್ಟಿದೆ.

Must Read

Skip to toolbar