ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪ್ರಧಾನಿಯಾಗುವ ಆಸೆಯ ಕುರಿತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಬರೆದಿರುವ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಗೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಕನಸು ಕಾಣುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಸೋನಿಯಾ ಪುಸ್ತಕದಲ್ಲಿ ಏನಿದೆ?
ಸೋನಿಯಾ ಗಾಂಧಿ ಅವರ ‘Belonging: A Journey Of Love’ ಆತ್ಮಕಥನದಲ್ಲಿ 2010ರಲ್ಲಿ ಪ್ರಣಬ್ ಮುಖರ್ಜಿ ಅವರೊಂದಿಗೆ ನಡೆದ ಸಂಭಾಷಣೆಯನ್ನು ಉಲ್ಲೇಖಿಸಲಾಗಿದೆ. ಅಂದು ಪ್ರಣಬ್ ಅವರು ನಾಯಕತ್ವದಲ್ಲಿ ಬದಲಾವಣೆಯಾಗಬೇಕಾದ ಸಮಯ ಬಂದಿದೆ ಎಂಬರ್ಥದಲ್ಲಿ ಮಾತನಾಡಿದ್ದರು. ಇದನ್ನು ತಾವು ಪ್ರಧಾನಿಯಾಗುವ ಅವರ ಬಹುಕಾಲದ ಆಸೆಯ ಸೂಚನೆಯಾಗಿ ಅರ್ಥೈಸಿಕೊಂಡಿದ್ದಾಗಿ ಸೋನಿಯಾ ಬರೆದಿದ್ದಾರೆ. ಈ ಮಾತು ತಮಗೆ ಅಚ್ಚರಿ ಮೂಡಿಸಿತ್ತು ಎಂದೂ ಅವರು ದಾಖಲಿಸಿದ್ದಾರೆ.
‘ಆಕಾಂಕ್ಷೆ ಹೊಂದುವುದು ಅಪರಾಧವೇ?’
ತಂದೆಯ ಪರವಾಗಿ ಮಾತನಾಡಿರುವ ಶರ್ಮಿಷ್ಠಾ, ಪ್ರಣಬ್ ಮುಖರ್ಜಿ ಅವರ ಪ್ರಧಾನಿಯಾಗುವ ಆಸೆಗೆ ದಶಕಗಳ ರಾಜಕೀಯ ಅನುಭವ, ಆಡಳಿತದ ಪರಿಣತಿ, ಪರಿಶ್ರಮ ಮತ್ತು ಬುದ್ಧಿವಂತಿಕೆಯ ಬೆಂಬಲವಿತ್ತು ಎಂದು ಹೇಳಿದ್ದಾರೆ. ಯಾವುದೇ ಅರ್ಹ ರಾಜಕಾರಣಿಗೆ ಪ್ರಧಾನಿಯಾಗುವ ಆಸೆ ಇರುವುದು ಸಹಜ. ಅದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ನೆಹರು-ಗಾಂಧಿ ಕುಟುಂಬದ ರಾಜಕೀಯ ಹಿನ್ನೆಲೆಯಿಲ್ಲದೆ, ಸ್ವಂತ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಬೆಳೆದ ವ್ಯಕ್ತಿಯೊಬ್ಬರು ಪ್ರಧಾನಿಯಾಗುವ ಕನಸು ಕಾಣುವುದನ್ನು ಸೋನಿಯಾ ಅಚ್ಚರಿಯಿಂದ ನೋಡಿದ್ದೇಕೆ ಎಂದೂ ಶರ್ಮಿಷ್ಠಾ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ತಂದೆಗೆ ಯಾರ ಮೇಲೂ ಅಸಮಾಧಾನವಿರಲಿಲ್ಲ
ಸೋನಿಯಾ ವಿಷಯ ಬದಲಿಸಿದ ಘಟನೆಯನ್ನು ಪ್ರಣಬ್ ಅವರು ತಮ್ಮ ವಿರುದ್ಧವಾಗಿ ಪರಿಗಣಿಸಿರಲಿಲ್ಲ ಎಂದು ಶರ್ಮಿಷ್ಠಾ ಸ್ಪಷ್ಟಪಡಿಸಿದ್ದಾರೆ. ತಂದೆ ವಾಸ್ತವಿಕ ಮನೋಭಾವದ ವ್ಯಕ್ತಿಯಾಗಿದ್ದು, ಸೋನಿಯಾ ಅವರ ಪರಿಸ್ಥಿತಿ ಮತ್ತು ವೈಯಕ್ತಿಕ ಆತಂಕಗಳನ್ನು ಅರ್ಥಮಾಡಿಕೊಂಡಿದ್ದರು ಎಂದಿದ್ದಾರೆ.
2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಬಳಿಕ ಅವರು ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.



