November 11, 2026
Wednesday, November 11, 2026
spot_img

ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿಗರಿಗೆ ಕಲುಷಿತ ಗಾಳಿಯ ಶಾಕ್: ಶೇ.30ರಷ್ಟು ಹೆಚ್ಚಿದ ಮಾಲಿನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೀಪಾವಳಿ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಜನರಿಗೆ ವಾಯುಮಾಲಿನ್ಯದ ಆತಂಕ ಎದುರಾಗಿದೆ. ಸತತ ಮೂರು ದಿನಗಳ ಕಾಲ ನಡೆದ ಪಟಾಕಿ ಸಿಡಿತದಿಂದ ನಗರದ ಗಾಳಿಯ ಗುಣಮಟ್ಟ ಗಣನೀಯವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣದಲ್ಲಿ ಸುಮಾರು ಶೇ.30ರಷ್ಟು ಏರಿಕೆಯಾಗಿದೆ. ಹಲವು ಬಡಾವಣೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಕಳವಳಕಾರಿ ಮಟ್ಟ ತಲುಪಿರುವುದು ಸಾರ್ವಜನಿಕರ ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿದೆ.

ಪಟಾಕಿ ಹೊಗೆಗೆ ಕಲುಷಿತವಾದ ಸಿಲಿಕಾನ್ ಸಿಟಿ

ಪಟಾಕಿಗಳಿಂದ ಬಿಡುಗಡೆಯಾದ ಹೊಗೆ, ಧೂಳು ಮತ್ತು ಸೂಕ್ಷ್ಮ ಕಣಗಳು ವಾತಾವರಣದಲ್ಲಿ ಬೆರೆತು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಿವೆ. ನವೆಂಬರ್ 9ರಂದು ನಗರದ ಕೆಲವು ಭಾಗಗಳಲ್ಲಿ AQI 180ರ ಗಡಿ ದಾಟಿದ್ದು, ಕೋರಮಂಗಲದಲ್ಲಿ ಗರಿಷ್ಠ 186 ದಾಖಲಾಗಿದೆ. ಸರ್ಜಾಪುರದಲ್ಲಿ 181, ಲಾಲ್‌ಬಾಗ್ ವೆಸ್ಟ್ ಗೇಟ್‌ನಲ್ಲಿ 179 ಹಾಗೂ ರಿಚರ್ಡ್ ಟೌನ್‌ನಲ್ಲಿ 170ರಷ್ಟು ಮಾಲಿನ್ಯ ಪ್ರಮಾಣ ವರದಿಯಾಗಿದೆ.

ಇದನ್ನೂ ಓದಿ:

ಇನ್ನು ಸಿಲ್ಕ್ ಬೋರ್ಡ್‌ನಲ್ಲಿ 179, ವರ್ತೂರಿನಲ್ಲಿ 145, ಪೀಣ್ಯದಲ್ಲಿ 115 ಹಾಗೂ ಬಾಣಸವಾಡಿಯಲ್ಲಿ 111 AQI ದಾಖಲಾಗಿದೆ. ಹೆಬ್ಬಾಳದಲ್ಲಿ 106, ಆರ್.ಆರ್. ನಗರ ಮತ್ತು ಮಲ್ಲಸಂದ್ರದಲ್ಲಿ ತಲಾ 117ರಷ್ಟು ಸೂಚ್ಯಂಕ ಕಂಡುಬಂದಿದೆ. ಜಯನಗರ 5ನೇ ಹಂತ, ಬಿಟಿಎಂ ಲೇಔಟ್ ಹಾಗೂ ನಿಮ್ಹಾನ್ಸ್ ಡೈರಿ ಸರ್ಕಲ್ ಭಾಗಗಳಲ್ಲಿ 114ರಷ್ಟು AQI ದಾಖಲಾಗಿದೆ.

ಮಕ್ಕಳು, ವೃದ್ಧರು ಹೆಚ್ಚು ಜಾಗರೂಕರಾಗಿರಲಿ

ಗಾಳಿಯಲ್ಲಿನ ಮಾಲಿನ್ಯ ಹೆಚ್ಚಳವು ಮಕ್ಕಳ, ವೃದ್ಧರ ಹಾಗೂ ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆ ಹೊಂದಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ಕಡಿಮೆ ಮಾಡುವುದು, ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ವ್ಯಾಯಾಮ ತಪ್ಪಿಸುವುದು ಮತ್ತು ಅಗತ್ಯವಿದ್ದಲ್ಲಿ ಸೂಕ್ತ ಮಾಸ್ಕ್ ಧರಿಸುವುದು ಉತ್ತಮ.

Must Read

Skip to toolbar