November 11, 2026
Wednesday, November 11, 2026
spot_img

ಆರು ತಿಂಗಳ ದಾಟಿದ ನಂತರ ಮಕ್ಕಳಿಗೆ ಯಾವೆಲ್ಲ ಪದಾರ್ಥ ನೀಡಬಹುದು? ಇಲ್ಲಿದೆ ಮಾಹಿತಿ

ಮಗು ಹುಟ್ಟಿದಾಗಿನಿಂದ ಆರು ತಿಂಗಳವರೆಗೆ ಅವುಗಳಿಗೆ ತಾಯಿಯ ಎದೆಹಾಲನ್ನು ಬಿಟ್ಟು ಇನ್ನೇನನ್ನೂ ನೀಡುವಂತಿಲ್ಲ. ಮಕ್ಕಳಿಗೆ ಬಿಕ್ಕಳಿಕೆ ಬಂದರೂ ನೀರನ್ನು ಕುಡಿಸುವಂತಿಲ್ಲ. ಆರು ತಿಂಗಳ ನಂತರ ತಾಯಿಯ ಹಾಲಿನ ಜೊತೆಗೆ ಇತರೆ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಿಸಲು ಆರಂಭಿಸಬಹುದು. ಮಕ್ಕಳಿಗೆ ಯಾವೆಲ್ಲಾ ಪದಾರ್ಥಗಳನ್ನು ನೀಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ..

ರಾಗಿ: ರಾಗಿಯನ್ನು ತೊಳೆದು, ಮೊಳಕೆ ಬರಿಸಿ, ಬಿಸಿಲಿನಲ್ಲಿ ಒಣಗಿಸಿ ತದನಂತರ ಅದನ್ನು ಪುಡಿ ಮಾಡಿಸಬೇಕು. ತದನಂತರ ಎರಡು ಬಾರಿ ಶೋಧಿಸಿ ನೀರಿನ ಜೊತೆ ಕಲಸಿ ರಾಗಿ ಸರಿ ತಯಾರಿಸಬಹುದು. ಇದಕ್ಕೆ ಇನ್ಯಾವುದೇ ಪದಾರ್ಥ ಹಾಕುವಂತಿಲ್ಲ. ಉಪ್ಪು, ಜೀರಿಗೆ, ಬೆಲ್ಲ ಯಾವ ಪದಾರ್ಥಗಳನ್ನು ಸೇರಿಸಬೇಡಿ. ಬರೀ ರಾಗಿ ಹಾಗೂ ನೀರು ಎರಡೇ ಪದಾರ್ಥಗಳನ್ನು ಹಾಕಬೇಕು. ಮಗು ಒಂದು ವರ್ಷ ದಾಟಿದ ನಂತರ ಇದಕ್ಕೆ ಬೇಳೆಕಾಳುಗಳು, ಜೀರಿಗೆ, ಮೆಣಸು ಎಲ್ಲವನ್ನೂ ಸೇರಿಸಬಹುದು. ಈಗಲೂ ಬೆಲ್ಲ ಹಾಗೂ ಉಪ್ಪನ್ನು ಅವಾಯ್ಡ್‌ ಮಾಡುವುದು ಉತ್ತಮ.

ಅನ್ನ: ಹಲವು ಮಂದಿ ಮಕ್ಕಳಿಗೆ ಒಂದು ಹೊತ್ತು ಅನ್ನ, ಒಂದು ಹೊತ್ತು ರಾಗಿ ನೀಡುವ ಅಭ್ಯಾಸ ಮಾಡಿರುತ್ತಾರೆ. ಮೆತ್ತಗೆ ಬೆಂದಿರುವ ಅನ್ನವನ್ನು ಮಕ್ಕಳಿಗೆ ತಿನ್ನಿಸಬಹುದು. ಮುಂದೆ ಮಕ್ಕಳು ಅನ್ನ ಇಷ್ಟಪಡಲಿ ಎಂದು ಇದನ್ನು ತಿನ್ನಿಸಲಾಗುತ್ತದೆ. ಬರೀ ಅನ್ನದ ಬದಲು, ಅನ್ನದ ಜೊತೆಗೆ ಆಲೂಗಡ್ಡೆ, ಕ್ಯಾರೆಟ್‌, ಗೆಣಸು ಈ ರೀತಿ ಪದಾರ್ಥಗಳನ್ನು ಮಿಕ್ಸ್‌ ಮಾಡಿ ತಿನ್ನಿಸಬಹುದು.

ತರಕಾರಿಗಳು : ಏಳೆಂಟು ತಿಂಗಳ ನಂತರ ಮಕ್ಕಳಿಗೆ ತರಕಾರಿಗಳನ್ನು ಬೇಯಿಸಿ ತಿನ್ನಿಸಬಹುದು. ಇದರಿಂದ ಮಕ್ಕಳಿಗೆ ಬೇಕಾದ ಫೈಬರ್‌ ಹಾಗೂ ಪೋಷಕಾಂಶಗಳು ಸಿಗುತ್ತವೆ. ಇದರ ಜೊತೆಗೆ ರಾಗಿಸರಿಯನ್ನು ನಿಲ್ಲಿಸಬೇಡಿ. ಮಕ್ಕಳು ತಾವಾಗೇ ಇಷ್ಟಪಡದೇ ರಾಗಿ ಸರಿ ಮುಟ್ಟಲು ಕಿರಿಕಿರಿ ಮಾಡುತ್ತಾರೆ ಎನ್ನುವವರೆಗೂ ಅದನ್ನು ಡಯಟ್‌ನಲ್ಲಿ ಸೇರಿಸಿ.

ಹಣ್ಣು: ಬಾಳೆಹಣ್ಣು, ಸೇಬು, ಬ್ಲೂಬೆರಿ, ಅವಕಾಡೋಗಳನ್ನು ಮಕ್ಕಳಿಗೆ ಪ್ಯೂರಿ ಮಾಡಿ ತಿನ್ನಿಸಬಹುದು. ಮಿಕ್ಸಿಯಲ್ಲಿ ಅಥವಾ ಸ್ಪೂನ್‌ನಲ್ಲಿ ಸ್ಮಾಶ್‌ ಮಾಡಿ ತಿನ್ನಿಸಿ. ಸಿಹಿ ಇರುವ ಕಾರಣ ಮಕ್ಕಳಿಗೆ ಹಣ್ಣು ಇಷ್ಟವಾಗುತ್ತದೆ. ಇದರ ಜೊತೆಗೆ ಬೇಯಿಸಿ ಓಟ್ಸ್‌ ಕೂಡ ಮಕ್ಕಳಿಗೆ ತಿನ್ನಿಸಬಹುದು.

ಅಂಗಡಿಗಳಲ್ಲಿ ಸಿಗುವ ಪುಡಿಗಳನ್ನು ತಂದು ಬಿಸಿ ನೀರು ಹಾಕಿ ತಿನ್ನಿಸುವ ಅಭ್ಯಾಸವನ್ನು ನಿಲ್ಲಿಸಿಬಿಡಿ. ಸಕ್ಕರೆ ಉಪ್ಪು ಇಲ್ಲದ, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಮಣೆ ಹಾಕಿ. ಒಂದು ವರ್ಷದವರೆಗೂ ಉಪ್ಪು ಹಾಗೂ ಎರಡು ವರ್ಷದವರೆಗೂ ಸಕ್ಕರೆಯನ್ನು ಅವಾಯ್ಡ್‌ ಮಾಡುವುದು ಒಳಿತು

Must Read